ಮಂಡ್ಯ (Mandya): ನಾನು ಮಂಡ್ಯ ಬಿಟ್ಟು ಹೋಗುವುದಿಲ್ಲ, ಮಂಡ್ಯ ನನ್ನನ್ನು ಬಿಡುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾನು ಮಂಡ್ಯ ಕ್ಷೇತ್ರ ಬಿಟ್ಟು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂಬುದು ಶುದ್ಧ ಸುಳ್ಳು. ನಾನು ಕ್ಷೇತ್ರ ಬಿಡುತ್ತೇನೆ ಎಂದು ಕೆಲವರು ಹಗಲುಗನಸು ಕಾಣುತ್ತಿದ್ದಾರೆ ಎಂದರು.
ನನಗೆ ರಾಜಕೀಯ ಅನಿವಾರ್ಯವಲ್ಲ, ಮಂಡ್ಯ ಜನರಿಗಾಗಿ ಮಾತ್ರ ನಾನು ರಾಜಕೀಯಕ್ಕೆ ಬಂದಿದ್ದೇನೆ. ನಾನು ಮಂಡ್ಯ ಬಿಟ್ಟು ಹೋಗುವುದಿಲ್ಲ. ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಕೆಲವರು ರಾಜಕೀಯಕ್ಕಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನನ್ನ ಮಗನಿಗಾಗಿಯೂ ನಾನು ಯಾವುದೇ ಪಕ್ಷದಿಂದ ಟಿಕೆಟ್ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಶೀಥಲ ಸಮರ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಸುಮಲತಾ ಅವರು, ನನಗೆ ಯಾರ ವಿರುದ್ಧವೂ ಶೀಥಲ ಸಮರ ಇಲ್ಲ. ಹೆದ್ದಾರಿ ವಿಚಾರದಲ್ಲಿ ನಮ್ಮ ಜನರಿಗೆ ತೊಂದರೆಯಾದರೆ ನಾನು ಕೂಡ ಹೋರಾಟ ನಡೆಸುತ್ತೇನೆ. ಕೆಎಚ್‌ಬಿ ಕಾಲೋನಿಯಲ್ಲಿ ಹಾಳಾಗಿರುವ ರಸ್ತೆ ದುರಸ್ತಿ ಮಾಡಲು ದಿಶಾ ಸಭೆಯಲ್ಲೇ ಹಿಂದೆ ಸೂಚಿಸಿದ್ದೆ. ಅಲ್ಲಿ ಹೋಗಿ ಫೋಟೊ ತೆಗಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿದರೆ ನನಗೆ ಏನೂ ತೊಂದರೆ ಇಲ್ಲ ಎಂದರು.
ರೈಲಿನಲ್ಲಿ ಬಂದ ಸಂಸದೆ: ಸುಮಲತಾ ಬೆಂಗಳೂರಿನಿಂದ ರೈಲಿನಲ್ಲಿ ಬಂದರು. ಈ ಕುರಿತು ಮಾತನಾಡಿದ ಅವರು ‘ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ. ಹೀಗಾಗಿ ರೈಲಿನ ಮೂಲಕ ಪ್ರಯಾಣಿಸಿದೆ ಎಂದರು.