ನವದೆಹಲಿ : ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಸಮರ ಸಾರಿದ್ದ ಭಿನ್ನ ನಾಯಕರು ಈಗ ತಮ್ಮ ಹೋರಾಟದ ದಾರಿಯನ್ನು ಬದಲಿಸಿದ್ದಾರೆ. ಕೂಡಲೇ ಬಿ.ವೈ ವಿಜಯೇಂದ್ರ ಅವರನ್ನು ಬದಲಿಸಲು ಒತ್ತಡ ಹೇರುವ ಬದಲು ಮುಂಬರುವ ವಿಧಾನಸಭೆ ಚುನಾವಣೆಗೆ ಅವರು ನೇತೃತ್ವ ವಹಿಸದಂತೆ ನೋಡಿಕೊಳ್ಳುವ ಪ್ರಯತ್ನ ಆರಂಭಿಸಿದ್ದಾರೆ.
ಕಳೆದ ಮೂರ ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿರುವ ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದ ಭಿನ್ನರ ತಂಡ ರಾಜ್ಯ ಬಿಜೆಪಿ ಉಸ್ತುವಾರಿ ರಾಧ ಮೋಹನ್ ದಾಸ್ ಅಗರವಾಲ್, ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ, ವಿ. ಸೋಮಣ್ಣ, ಸಂಸದರಾದ ಬಸವರಾಜ್ ಬೊಮ್ಮಾಯಿ, ಡಾ.ಕೆ ಸುಧಾಕರ್ ಸೇರಿದಂತೆ ಹಲವರನ್ನು ಭೇಟಿ ಮಾಡಿದ್ದಾರೆ.
ಬಿಜೆಪಿ ಪ್ರತ್ಯೇಕ ಬಣದ ನಾಯಕರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ವಿಜಯೇಂದ್ರ ಪಕ್ಷದ ಹೋರಾಟಗಳನ್ನು ಸಮರ್ಪಕವಾಗಿ ನಡೆಸುತ್ತಿಲ್ಲ. ರಾಜ್ಯದ ಪ್ರಸಕ್ತ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಈ ಸಂಘಟನೆ ಬಲಪಡಿಸುವಲ್ಲಿ ವಿಫಲರಾಗಿದ್ದಾರೆ. ಮಾಧ್ಯಮ ಹೇಳಿಕೆಗಳ ಮಟ್ಟಕ್ಕೆ ಮಾತ್ರ ಸೀಮಿತವಾಗಿದ್ದಾರೆ ಎಂದು ರೆಬೆಲ್ ತಂಡ ಹೈಕಮಾಂಡ್ ನಾಯಕರ ಮುಂದೆ ಆಕ್ರೋಶ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಂತರಿಕ ಸಂಘರ್ಷ, ಸಿಎಂ ಬದಲಾವಣೆ ಗೊಂದಲ, ಕಬ್ಬು ಬೆಳೆಗಾರರ ಸಮಸ್ಯೆ, ಮೆಕ್ಕೆಜೋಳ ಸಮಸ್ಯೆ ಇತ್ಯಾದಿ ಪ್ರಮುಖ ಸಮಸ್ಯೆಗಳ ವಿರುದ್ಧ ರಾಜ್ಯ ಘಟಕ ಸಮರ್ಪಕ ಹೋರಾಟ ನಡೆಸಿಲ್ಲ ಎಂದು ಪ್ರತ್ಯೇಕ ಬಣದ ನಾಯಕರು ಹೇಳಿದ್ದಾರೆ.
ಈಗಾಗಲೇ ಎರಡು ವರ್ಷ ಬಿ.ವೈ ವಿಜಯೇಂದ್ರ ಪೂರ್ಣಗೊಳಿಸಿದ್ದು, ಇನ್ನೊಂದು ವರ್ಷದ ಅವಧಿ ಬಾಕಿ ಉಳಿದಿದೆ. ಮುಂದೆ ಪಂಚರಾಜ್ಯಗಳ ಚುನಾವಣೆ ಆರಂಭವಾಗುವ ಹಿನ್ನಲೆ ಬದಲಾವಣೆ ಸಾಧ್ಯತೆ ಮಂದವಾಗಿವೆ. ಈ ಹಿನ್ನಲೆ ಕೂಡಲೇ ಬದಲಾವಣೆಗೆ ಒತ್ತಡ ಹೇರುವ ಬದಲು ಮುಂಬರುವ ಚುನಾವಣೆ ಸಂದರ್ಭಕ್ಕೆ ಅವರ ಅವಧಿಯನ್ನು ಹೆಚ್ಚಿಸಬಹುದಾದ ಹೈಕಮಾಂಡ್ ನಿರ್ಧಾರವನ್ನು ಬದಲಿಸಬೇಕು ಮತ್ತು ವಿಜಯೇಂದ್ರ ಚುನಾವಣೆವರೆಗೂ ಮುಂದುವರಿಯದಂತೆ ನೋಡಿಕೊಳ್ಳುವ ಲೆಕ್ಕಚಾರ ಹಾಕಿಕೊಂಡಿದೆ ಎನ್ನಲಾಗಿದೆ.
ದೆಹಲಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಹೋರಾಟದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರತ್ಯೇಕ ಬಣದ ನಾಯಕ ಕುಮಾರ್ ಬಂಗಾರಪ್ಪ, ಅದು ಕಳೆದ ಒಂದೂವರೆ ವರ್ಷದಿಂದ ನಡೆಯುತ್ತಿದೆ. ಅದರ ಬಗ್ಗೆ ಪದೇಪದೆ ಮಾತಾಡುವ ಕೆಲಸಕ್ಕೆ ಹೋಗಿಲ್ಲ. ನಾವು ಪ್ರಸ್ತುತ ರಾಜಕೀಯದತ್ತ ಗಮನ ಹರಿಸುತ್ತಿದ್ದೇವೆ ಎಂದಿದ್ದಾರೆ.
ಈ ಸಂಘಟನೆಯನ್ನು ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಬಲಪಡಿಸಬೇಕು ಎಂದು ಅಮಿತ್ ಶಾ ಸೂಚನೆ ಇದೆ. ನಿಮ್ಮ ಬೂತ್ ಅನ್ನು ಬಲಪಡಿಸಿ, ನಿಮ್ಮ ಮಂಡಲವನ್ನು ಸಿದ್ಧಪಡಿಸಿಕೊಳ್ಳಿ. ರಾಷ್ಟ್ರ ನಿರ್ಮಾಣಕ್ಕೆ ಮಂಡಲ ಮತ್ತು ಬೂತ್ ಮುಖ್ಯವೇ ಹೊರತು, ರಾಷ್ಟ್ರದ ರಾಜಕಾರಣವಲ್ಲ ಎಂದು ಶಾ ಹೇಳಿರುವುದಾಗಿ ಕುಮಾರ್ ಬಂಗಾರಪ್ಪ ಉಲ್ಲೇಖಿಸಿದ್ದಾರೆ. ಈ ಪಕ್ಷವು ಇದೇ ತತ್ವವನ್ನು ಅನುಸರಿಸುತ್ತಿದ್ದು, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ಕಾರ್ಪೊರೇಷನ್ ಚುನಾವಣೆಗಳಿಗೆ ಬೂತ್ ಮಟ್ಟದಲ್ಲಿ ಸಿದ್ಧತೆ ನಡೆಸುತ್ತಿದೆ ಎಂದಿದ್ದಾರೆ.















