ಮನೆ ರಾಜಕೀಯ ಹೈಕಮಾಂಡ್ ಹೇಳೋವರೆಗೂ ನಾನೇ ಮುಖ್ಯಮಂತ್ರಿ: ಸದನದಲ್ಲಿ ಸಿದ್ದರಾಮಯ್ಯ ಪುನರುಚ್ಚಾರ

ಹೈಕಮಾಂಡ್ ಹೇಳೋವರೆಗೂ ನಾನೇ ಮುಖ್ಯಮಂತ್ರಿ: ಸದನದಲ್ಲಿ ಸಿದ್ದರಾಮಯ್ಯ ಪುನರುಚ್ಚಾರ

0

ಬೆಳಗಾವಿ : ಸಿಎಂ ಬದಲಾವಣೆ, ಐದು ವರ್ಷ ಅಧಿಕಾರ ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆದಿದೆ. ನೀವೇ ಐದು ವರ್ಷ ಸಿಎಂ ಆಗಿರ್ತೀರಾ ಸರ್ ಎಂಬ ಆರ್.ಅಶೋಕ್ ಅವರ ಪ್ರಶ್ನೆಗೆ, ಹೈಕಮಾಂಡ್ ಹೇಳೋವರೆಗೂ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಉತ್ತರಿಸಿದ್ದಾರೆ. ಕೃಷಿಪತ್ತಿನ ಸಹಕಾರ ಸಂಘಗಳಿಗೆ ಷೇರು ಧನ ಕೊಡುವ ವಿಚಾರದಲ್ಲಿ ತಾರತಮ್ಯ ಆಗಿದೆ ಎಂದು ಸದನದಲ್ಲಿ ಕುಣಿಗಲ್ ರಂಗನಾಥ್ ಪ್ರಶ್ನಿಸಿದ್ದರು. ರಂಗನಾಥ್ ಪ್ರಶ್ನೆಗೆ ಉತ್ತರ ಕೊಡ್ತಿದ್ದ ಸಿಎಂ, ರಂಗನಾಥ್ ನಮ್ಮ ಮೇಲೆ ವಿಶ್ವಾಸ ಇಡಿ. ತಾರತಮ್ಯ ಆಗಿದ್ರೆ ನಿಮ್ಮ ಸಮಸ್ಯೆ ಬಗೆಹರಿಸ್ತೇವೆ ಎಂದರು.

ಈ ವೇಳೆ ಅಶೋಕ್ ಮಧ್ಯಪ್ರವೇಶಿಸಿ, ತಾರತಮ್ಯ ಬೇಕು ಅಂತ ಮಾಡಿದ್ದಾರೆ ಅಂದ್ರು. ಅದಕ್ಕೆ ಸಿಎಂ, ನೀವು ಉರಿಯುತ್ತಿರುವ ಬೆಂಕಿಗೆ ತುಪ್ಪ ಹಾಕಬೇಡ ಎಂದರು. ಹಾಗಾದ್ರೆ ಉರಿಯುತ್ತಿದೆಯಾ ನಿಮ್ಮಲ್ಲಿ ಅಂತ ಅಶೋಕ್ ಕೆಣಕಿದರು. ಅದು ಗಾದೆ ಕಣಯ್ಯ ಅಂತ ಸಿಎಂ ಸ್ಪಷ್ಟನೆ ಕೊಟ್ಟರು. ಈ ವೇಳೆ ಅಶೋಕ್ ಮಾತನಾಡಿ, ಕುಣಿಗಲ್ ರಂಗನಾಥ್ ಅವರು ಡಿಕೆಶಿ ಸಿಎಂ ಆಗೋದಕ್ಕೆ ಪೂಜೆ, ಪುನಸ್ಕಾರ ಮಾಡ್ತಿದ್ದಾರೆ ಎಂದರು. ರಂಗನಾಥ್ ಮಾತನಾಡಿ, ಪೂಜೆ ಪುನಸ್ಕಾರ ಮಾಡ್ತಿರೋದು ನಮ್ಮ ಕ್ಷೇತ್ರಕ್ಕಾಗಿ ಎಂದರು. ಸಿಎಂ ಉರಿಯುತ್ತಿರೋದಕ್ಕೆ ತುಪ್ಪ ಹಾಕಬೇಡ ಅಂದ್ರು, ಅಲ್ಲಿಗೆ ಜಗಳ ಹೊತ್ತಿ ಉರೀತಿದೆ ಅಂತ ಅರ್ಥ ಎಂದು ಅಶೋಕ್ ಟಾಂಗ್ ಕೊಟ್ಟರು. ಗಾದೆ ಅದು, ನಿಮಗೆ ಗಾದೆ ಗೊತ್ತಿಲ್ಲ ಅಂದ್ರೆ ಏನ್ಮಾಡೋದು ಅಂತ ಸಿಎಂ ಸ್ಪಷ್ಟಪಡಿಸಿದರು.

ಇನ್ನೊಂದ್ಸಲ ಗಾದೆ ಹೇಳಿ ಸರ್ ಅಂತ ಅಶೋಕ್ ಕಿಚಾಯಿಸಿದರು. ಆಂ, ಇನ್ನೊಂದ್ಸಲ ಹೇಳಲಾ? ಉರಿಯುತ್ತಿರುವ ಬೆಂಕಿಗೆ ತುಪ್ಪ ಹಾಕಬೇಡಿ, ವಿಪಕ್ಷ ಇರೋದೇ ಉಪ್ಪು ಹಾಕೋದಿಕ್ಕೆ ಅಂತ ಸಿಎಂ ಮತ್ತೆ ಹೇಳಿದರು. ನಾವು ಉಪ್ಪು ಹಾಕ್ತಿಲ್ಲ, ಅವರೇ ಹಾಕ್ತಿದ್ದಾರೆ ಎಂದರು ಅಶೋಕ್. ರಂಗನಾಥ್ ಅವರು ಸುಮ್ಮನೆ ಇದ್ದಾರೆ, ನೀವ್ಯಾಕೆ ಸುಮ್ಮನಿರಲ್ಲ ಅಂತ ಸಿಎಂ ಪ್ರಶ್ನಿಸಿದರು. ಅವರು ಸುಮ್ಮನೆ ಇರಲ್ಲ ಸರ್, ಬಹಳ ಸಲ ಕೇಳಿದೆ, ಪೂಜೆ ವ್ರತ ಮಾಡ್ತಿದೀನಿ ಡಿಕೆಶಿ ಒಂದ್ಸಲ ಸಿಎಂ ಆಗೋದು ಕನಸು ಅಂದ್ರು ಅಂತ ಅಶೋಕ್ ಮಾತನಾಡಿದರು. ವಿಪಕ್ಷದವ್ರು ನೀವು ಏನೇ ಪ್ರಚೋದನೆ, ಕಿತಾಪತಿ ಮಾಡಿದ್ರೂ ನಮ್ಮಲ್ಲಿ ಯಾರೂ ಪ್ರಚೋದನೆ ಆಗಲ್ಲ ಅಂತ ಸಿಎಂ ತಿರುಗೇಟು ಕೊಟ್ಟರು.

ನೀವೇ ಐದು ವರ್ಷ ಸಿಎಂ ಆಗೀರ್ತೀರಾ ಸರ್ ಅಂತ ಅಶೋಕ್ ಪ್ರಶ್ನಿಸಿದರು. ಅದನ್ನ ನೀನ್ಯಾಕೆ ಕೇಳ್ತೀಯಾ? ಐದು ವರ್ಷ ಇರಿ ಅಂತ ಜನ ಆಶೀರ್ವಾದ ಮಾಡಿದ್ದಾರೆ, ನಾವೇ ಐದು ವರ್ಷ ಇರ್ತೇವೆ ಅಂತ ಸಿಎಂ ಹೇಳಿದರು. ನಾವು ಎದುರು ಮನೆಯವ್ರು ಸರ್, ಕೇಳ್ತೀವಿ, ನೀವು ಐದು ವರ್ಷ ಇರೋದು ಗ್ಯಾರಂಟಿನಾ ಸರ್ ಎಂದು ಅಶೋಕ್ ಮತ್ತೆ ಪ್ರಶ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪರಮೇಶ್ವರ್, ಜನ ಐದು ವರ್ಷ ಆಡಳಿತ ಮಾಡಿ ಅಂತ ಆಶೀರ್ವಾದ ಮಾಡಿದ್ದಾರೆ. ಐದು ವರ್ಷ ನಾವು ಇರ್ತೀವಿ ಅಂದಮೇಲೆ ನಿಮಗೇಕೆ ಅನುಮಾನ ಎಂದು ಹೇಳಿದರು. ಪರಮೇಶ್ವರ್ ಅವರೊಬ್ಬರೇ ಸರ್, ನಾನು ನೋಡಿದ ಹಾಗೆ ಅವರು ಯಾವಾಗಲೂ ನಿಮ್ಮ ಜತೆ ನಿಂತಿದ್ದಾರೆ ಸರ್, ಏನಾದರೂ ಅವಕಾಶ ಆದರೆ ಬ್ಲ್ಯಾಕ್ ಹಾರಿಸ್ತಾರೆ ಎಂದು ಅಶೋಕ್ ಟಾಂಗ್ ಕೊಟ್ಟರು.

140 ಶಾಸಕರು ನಮ್ ಜತೆ ಇದ್ದಾರೆ, ಜನ ಐದು ವರ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. 2028 ಕ್ಕೂ ನಾವೇ ಬರ್ತೇವೆ. ಬಿಜೆಪಿಯನ್ನು ಜನ ಯಾವತ್ತೂ ಅಧಿಕಾರಕ್ಕೆ ತರಲ್ಲ. ಜನರ ಆಶೀರ್ವಾದ ಪಡ್ಕೊಂಡು ಬಂದಿದ್ದೀರಾ ನೀವು? ಆಪರೇಷನ್ ಕಮಲ ಮಾಡಿ ಹಿಂಬಾಗಿಲ ಮೂಲಕ ಬಂದಿದ್ದೀರ, ಜನ ನಿಮಗೆ ಆಶೀರ್ವಾದ ಮಾಡಲ್ಲ ಅಂತ ಸಿಎಂ ಟಾಂಗ್ ಕೊಟ್ಟರು. 2018 ರಲ್ಲಿ ಜನ ನಿಮಗೂ ಆಶೀರ್ವಾದ ಮಾಡಿರ್ಲಿಲ್ಲ. ಜೆಡಿಎಸ್ ಜತೆ ಸೇರಿ ಸರ್ಕಾರ ಮಾಡಿದ್ರಲ್ಲ, ಅವರ ಮನೆ ಬಾಗಿಲಿಗೆ ಹೋಗಿದ್ರಲ್ಲ ಅಂತ ಅಶೋಕ್ ತಿರುಗೇಟು ಕೊಟ್ಟರು. ನಾವು ಅವರ ಮನೆ ಬಾಗಿಲಿಗೆ ಹೋಗಿರಲಿಲ್ಲ. ಬಿಜೆಪಿ ಬರಬಾರದು ಅಂತ ಅವರೇ ಬಂದಿದ್ರು, ನೀವ್ಯಾಕೆ ಅವರ ಜತೆ ಹೋಗಿದ್ದೀರಿ ಅಂತ ಸಿಎಂ ಮರುಪ್ರಶ್ನೆ ಹಾಕಿದರು.

ನೀವ್ಯಾಕೆ ಜೆಡಿಎಸ್ ಜತೆ ಹೋದ್ರಿ ಅಂತ ಬಿಜೆಪಿ ಸಿಎಂ ಪ್ರಶ್ನಿಸಿದಾಗ ಪ್ರಿಯಾಂಕ್ ಖರ್ಗೆ ಎದ್ದುನಿಂತು ಬೆಂಬಲ ಸೂಚಿಸಿದರು. ಆಗ ಅಶೋಕ್ ಬೆಂಬಲಕ್ಕೆ ಅರವಿಂದ್ ಬೆಲ್ಲದ್, ಸುನಿಲ್ ಕುಮಾರ್ ಬಂದರು. ಸಿಎಂ ಮಾತನಾಡಿ, ನಿಮ್ಮಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಾಕೆ ಕಚ್ಚಾಟ? ನಾವು ಹೈಕಮಾಂಡ್ ಹೇಳಿದಂಗೆ ಕೇಳ್ತೀವಿ, ಜನ ಆಶೀರ್ವಾದ ಮಾಡಿದ್ದಾರೆ ನಮಗೆ, ಜನ ಖುಷಿ ಆಗಿದ್ದಾರೆ, ನಿಮಗೆ ಅಸೂಯೆ, ಹೊಟ್ಟೆ ಕಿಚ್ಚು. ನಾವು ಐದು ವರ್ಷ ತುಂಬಿಸ್ತೇವೆ, ಮುಂದೆಯೂ ನಾವೇ ಗೆದ್ದು ಬರ್ತೇವೆ, ಮತ್ತೆ ನಾವೇ ಅಧಿಕಾರ ಮಾಡ್ತೇವೆ ಎಂದರು. ಸಿಎಂ ಮಾತಿಗೆ ಇತರೆ ಸದಸ್ಯರು ಮೇಜು ಕುಟ್ಟಿದರು.

ಸಿಎಂ ಸ್ಥಾನದ ಗೊಂದಲ ಬಗ್ಗೆ ಬಿಜೆಪಿ ಆರೋಪಗಳಿಗೆ ಸದನದಲ್ಲಿ ಸಿಎಂ ಸ್ಪಷ್ಟನೆ ನೀಡಿದರು. ನಮ್ಮಲ್ಲಿ ಹೈಕಮಾಂಡ್ ಇದೆ, ಹೈಕಮಾಂಡ್ ಏನು ತೀರ್ಮಾನ ಮಾಡ್ತಾರೋ ಅದರಂತೆ ಕೇಳ್ತೇವೆ. ಜನ ನಮಗೆ ಆಶೀರ್ವಾದ ಮಾಡಿದ್ದಾರೆ, ಬಿಜೆಪಿವರಿಗೆ ಜನ ಆಶೀರ್ವಾದ ಮಾಡಲ್ಲ, ಇವರು ವಿಪಕ್ಷ ಸ್ಥಾನದಲ್ಲಿ ಶಾಶ್ವತವಾಗಿ ಇರ್ತಾರೆ ಅಂತ ಸಿಎಂ ಟಾಂಗ್ ಕೊಟ್ಟರು. ಯತ್ನಾಳ್ ಮಾತನಾಡಿ, ಐದು ವರ್ಷ ಸಿಎಂ ಯಾರು ಅನ್ನೋದಷ್ಟೇ ಪ್ರಶ್ನೆ. ಸಿದ್ದರಾಮಯ್ಯ ಇರ್ತಾರೋ ಬೇರೆಯವ್ರು ಬರ್ತಾರೋ ಎಂದು ಪ್ರಶ್ನಿಸಿದರು. ಸುರೇಶ್ ಕುಮಾರ್ ಮಾತನಾಡಿ, ಇಷ್ಟು ದಿನ ಸಿಎಂ ನಾನೇ ಮುಂದುವರೀತೇನೆ ಅಂತಿದ್ರು. ಈಗ ಏಕವಚನದಿಂದ ಬಹುವಚನಕ್ಕೆ ಬಂದಿದ್ದಾರೆ. ನಾನು ಅನ್ನೋ ಕಡೆ ನಾವು ಅಂತಿದ್ದಾರೆ. ಪ್ರಾಯಶಹಃ ಕನಕದಾಸರು ಹೇಳಿದ್ದ ನಾನು ಹೋದಲ್ಲಿ ಮಾತ್ರ ಹೋಗುತ್ತೇನೆ ಅನ್ನೋದನ್ನು ಅನುಷ್ಠಾನಕ್ಕೆ ತಂದಿದ್ದಾರೆ ಎಂದು ಕಾಲೆಳೆದರು.

ಸಿಎಂ ಪ್ರತಿಕ್ರಿಯಿಸಿ, ನಾನು ಹೋದರೆ ಹೋದೇನು… ಇದು ಕನಕದಾಸರು ಹೇಳಿರೋದು. ಕನಕದಾಸರಿಗೂ ನನಗೂ ಹೋಲಿಕೆ ಮಾಡಬೇಡಿ. ನಾವು ಸರ್ಕಾರದಲ್ಲಿ. ಇದು ಬಹುವಚನ. ನಾನೇ ಮುಖ್ಯಮಂತ್ರಿ, ಈಗಲೂ ಮುಖ್ಯಮಂತ್ರಿ ಎಂದರು. ಸುನಿಲ್ ಕುಮಾರ್ ಎದ್ದುನಿಂತು, ನಾನೇ ಮುಂದಿನ ಐದು ವರ್ಷ ಸಿಎಂ ಅಂದಿದ್ರರಲ್ಲ ನೀವು ಈಗೇನಂತೀರಿ ಎಂದು ಪ್ರಶ್ನಿಸಿದರು. ಸಿಎಂ ಪ್ರತಿಕ್ರಿಯಿಸಿ, ನೀವ್ಯಾಕೆ ಮೂರು ಜನ ಸಿಎಂ ಮಾಡಿದ್ರಿ? ಈಗಲೂ ನಾನೇ ಮುಖ್ಯಮಂತ್ರಿ, ಈಗಲೂ ನಾನೇ ಮುಖ್ಯಮಂತ್ರಿ, ಮುಂದೇನೂ ಮುಖ್ಯಮಂತ್ರಿ. ಹೈಕಮಾಂಡ್ ಹೇಳುವವರೆಗೂ ನಾನೇ ಮುಖ್ಯಮಂತ್ರಿ ಎಂದು ಸಿಎಂ ಉತ್ತರ ಕೊಟ್ಟರು. ನೀವು ಯಾಕ್ರಿ ಮೂರು ಮೂರು ಸಿಎಂ ಬದಲಾಯಿಸಿದ್ರಿ ಎಂದು ಬಿಜೆಪಿಗೆ ತಿರುಗೇಟು ನೀಡಿದರು.