ಮನೆ ಅಂತಾರಾಷ್ಟ್ರೀಯ ಅಮೆರಿಕದ ಪ್ರತಿ ಯೋಧನಿಗೂ 1.60 ಲಕ್ಷ ಗಿಫ್ಟ್‌ – ಘೋಷಿಸಿದ ಟ್ರಂಪ್‌

ಅಮೆರಿಕದ ಪ್ರತಿ ಯೋಧನಿಗೂ 1.60 ಲಕ್ಷ ಗಿಫ್ಟ್‌ – ಘೋಷಿಸಿದ ಟ್ರಂಪ್‌

0

ವಾಷಿಂಗ್ಟನ್‌ : ಕಠಿಣ ವಲಸೆ ನೀತಿಗಳನ್ನು ತಮ್ಮ ಜೀವನದ ಪರಮಧ್ಯೇಯವನ್ನಾಗಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಅಮೆರಿಕವನ್ನು ವಲಸಿಗರಹಿತ ದೇಶವನ್ನಾಗಿ ಮಾಡುವತ್ತ ಅತಿ ವೇಗವಾಗಿ ಮುನ್ನುಗ್ಗುತ್ತಿದ್ದಾರೆ. ಈ ನಡುವೆ ಸಶಸ್ತ್ರಪಡೆಗಳ ಸೇವೆ ಮತ್ತು ತ್ಯಾಗವನ್ನ ಸ್ಮರಿಸಲು ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡಿದ್ದಾರೆ.

ಅಮೆರಿಕದ ಸ್ಥಾಪನಾ ವರ್ಷಾಚರಣೆ ಹಿನ್ನೆಲೆ ʻವಾರಿಯರ್‌ ಡಿವಿಡೆಂಡ್‌ʼ ಭಾಗವಾಗಿ ಪ್ರತಿ ಅಮೆರಿಕನ್‌ ಸೈನಿಕರಿಗೆ 1,776 ಡಾಲರ್‌ ಅಂದ್ರೆ ಸುಮಾರು 1.60 ಲಕ್ಷ ರೂ. ವಿಶೇಷ ನಗದು ಪಾವತಿಸುವುದಾಗಿ ಘೋಷಿಸಿದ್ದಾರೆ. ಹೀಗಾಗಿ ದೇಶಾದ್ಯಂತ ಇರುವ 14.5 ಲಕ್ಷ ಸೈನಿಕರು ಕ್ರಿಸ್‌ಮಸ್‌ಗೆ ಮುನ್ನವೇ ತಲಾ 1.60 ಲಕ್ಷ ರೂ. ನೆರವು ಪಡೆಯಲಿದ್ದಾರೆ. ಇದು ಅವರ ತ್ಯಾಗ ಮತ್ತು ಸೇವೆಗೆ ನೀಡುವ‌ ಪ್ರೋತ್ಸಾಹವಾಗಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಟ್ರಂಪ್‌, ಹೊಸ ಸುಂಕದ ಮಸೂದೆಗಳೊಂದಿಗೆ 14.5 ಲಕ್ಷ ಮಿಲಿಟರಿ ಸಿಬ್ಬಂದಿಗೆ ವಿಶೇಷ ನಗದು ಪಾವತಿ ಘೋಷಿಸಲು ನನಗೆ ಹೆಮ್ಮೆಯಾಗುತ್ತದೆ. ನಮ್ಮ ರಾಷ್ಟ್ರ ಸ್ಥಾಪನೆಯ ಗೌರವಾರ್ಥವಾಗಿ ಪ್ರತಿ ಸೈನಿಕರಿಗೆ ವಾರಿಯರ್‌ ಡಿವಿಡೆಂಡ್‌ ಘೋಷಿಸಿದ್ದೇವೆ. ಈಗಾಗಲೇ ಚೆಕ್‌ಗಳೂ ಬಂದಿವೆ ಎಂದು ತಿಳಿಸಿದ್ದಾರೆ.

ಸುಂಕದಿಂದಾಗಿ ನಾವು ಯಾರೂ ನಿರೀಕ್ಷೆ ಮಾಡದಷ್ಟು ಹೆಚ್ಚಿನ ಆದಾಯ ಗಳಿಸಿದ್ದೇವೆ. ಸುಂಕದ ಹೊಸ ಮಸೂದೆಗಳು ನಮಗೆ ಈ ನೆರವು ಘೋಷಿಸಲು ಸಹಾಯ ಮಾಡಿದೆ. ಆದ್ರೆ ನಮ್ಮ ಮಿಲಿಟರಿಗಿಂತ ಯಾರೂ ಇದಕ್ಕೆ ಅರ್ಹರಲ್ಲ. ಹಾಗಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಟ್ರಂಪ್‌ ಹೇಳಿದ್ದಾರೆ.

2025ರ ನವೆಂಬರ್‌ 30ಕ್ಕೆ ಅನ್ವಯವಾಗುವಂತೆ 0-6 ಮತ್ತು ಅದಕ್ಕಿಂತ ಕಡಿಮೆ ವೇತನ ಶ್ರೇಣಿಯಲ್ಲಿ ಮತ್ತು ಸಕ್ರಿಯ ಕರ್ತವ್ಯದಲ್ಲಿರುವವರು, ಹಾಗೆಯೇ ನವೆಂಬರ್ 30ಕ್ಕೆ ಅನ್ವಯವಾಗುವಂತೆ 31 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಸಕ್ರಿಯ-ಕರ್ತವ್ಯ ನಿರ್ವಹಿಸಿದ ಮೀಸಲು ಘಟಕ ಸಿಬ್ಬಂದಿ ಒಂದು ಬಾರಿಗೆ ಡಿವಿಡೆಂಡ್‌ ಪಡೆಯಲಿದ್ದಾರೆ.