ಮನೆ ಅಂತಾರಾಷ್ಟ್ರೀಯ ಗುಂಡೇಟಿಗೆ ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿ ಬಲಿ – ಮತ್ತೆ ಬಾಂಗ್ಲಾ ಧಗಧಗ

ಗುಂಡೇಟಿಗೆ ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿ ಬಲಿ – ಮತ್ತೆ ಬಾಂಗ್ಲಾ ಧಗಧಗ

0

ಢಾಕಾ : ಹಿಂಸಾಚಾರ, ಸಂಘರ್ಷ ಅನ್ನೋದು ಈಗ ಬಾಂಗ್ಲಾದೇಶದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಇದೀಗ ಬಾಂಗ್ಲಾದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವು, ಹೊಸ ಹಿಂಸಾತ್ಮಕ ಸಂಘರ್ಷಕ್ಕೆ ದಾರಿಮಾಡಿಕೊಟ್ಟಿದೆ. ರಾಜಧಾನಿ ಢಾಕಾದಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದು, ಎಲ್ಲೆಡೆ ಆಕ್ರೋಶ ಕಂಡುಬರುತ್ತಿದೆ.

ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಆಡಳಿತದ ವಿರುದ್ಧ ಚಳವಳಿಯಲ್ಲಿ ಹಾಗೂ ಭಾರತದ ವಿರೋಧಿ ವಾಕ್ಚಾತುರ್ಯಕ್ಕೆ ಹೆಸರುವಾಸಿಯಾಗಿದ್ದ ಇಂಕ್ವಿಲಾಬ್ ಮಂಚ್ ಸಂಚಾಲಕ ಷರೀಫ್‌ ಉಸ್ಮಾನ್‌ ಸಿಂಗಾಪುರದಲ್ಲಿ ಸಾವನ್ನಪ್ಪಿದ್ದಾರೆ. ಹಾದಿ ಸಾವಿನ ಬಳಿಕ ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಪ್ರತಿಭಟನಾಕಾರರು ಪ್ರಥಮ್ ಅಲೋ ಮತ್ತು ಡೈಲಿ ಸ್ಟಾರ್ ಕಚೇರಿಗಳ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಿದ್ದಾರೆ. ಅಷ್ಟೇ ಅಲ್ಲದೇ ರಾಜ್‌ಶಾಹಿಯಲ್ಲಿರುವ ಶೇಖ್‌ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷದ ಕಚೇರಿಗೂ ಕಚೇರಿಗೂ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಈ ಮಧ್ಯೆ ಹಿಂಸಾಚಾರ ಹತ್ತಿಕ್ಕಲು ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನುಸ್‌ ಢಾಕಾದಲ್ಲಿ ರಾಜ್ಯಮಟ್ಟದ ಸಭೆ ಕರೆದಿದ್ದಾರೆ.

2024ರ ಡಿ.12ರಂದು ಬಾಂಗ್ಲಾದೇಶ ವಿದ್ಯಾರ್ಥಿ ದಂಗೆಯ ನೇತೃತ್ವವಹಿಸಿದ್ದ ಷರೀಫ್ ಉಸ್ಮಾನ್ ಹಾದಿ ಅವರ ಮೇಲೆ, ಕಳೆದ ವಾರ ಮುಸುಕುಧಾರಿಗಳ ಗುಂಪೊಂದು ಗುಂಡಿನ ದಾಳಿ ನಡೆಸಿತ್ತು. ಹಾದಿ ಅವರಿಗೆ ಸಿಂಗಾಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತೆ ಫಲಕಾರಿಯಾಗದೇ ಹಾದಿ ಮೃತಪಟ್ಟಿದ್ದಾರೆ ಎಂದು ಸಿಂಗಾಪುರ ಸರ್ಕಾರದ ಮೂಲಗಳು ಖಚಿತಪಡಿಸಿವೆ.

ಸಾವಿನ ಸುದ್ದಿ ಹರಡುತ್ತಿದ್ದಂತೆ ಸಾವಿರಾರು ಜನರು ಶಹಬಾದ್‌ ಚೌಕ್‌ನಲ್ಲಿ ಜಮಾಯಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಮೊದಲಿಗೆ ಕಾರ್ವಾನ್‌ ಬಜಾರ್‌ನಲ್ಲಿರುವ ಪ್ರಥಮ್‌ ಅಲೋ ಪತ್ರಿಕೆ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲಿ ಕಟ್ಟದ ಹಲವು ಮಹಡಿಗಳನ್ನ ಧ್ವಂಸಗೊಳಿಸಿ, ಪೀಠೋಪಕರಣ ಹಾಗೂ ದಾಖಲೆಗಳಿಗೆ ಬೆಂಕಿ ಹಚ್ಚಿದ್ದಾರೆ. ನಂತರ ಡೈಲಿ ಸ್ಟಾರ್ ಕಚೇರಿಯ ಮೇಲೆ ದಾಳಿ ಮಾಡಿ, ಅದನ್ನೂ ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ.

ನಿನ್ನೆ ತಡರಾತ್ರಿ ಚಿತ್ತಗಾಂಗ್‌ನಲ್ಲಿ ನಡೆದ ಹಿಂಸಾಚಾರದ ವೇಳೆ ಭಾರತ ಹಾಗೂ ಅವಾಮಿ ಲೀಗ್ ವಿರೋಧಿ ಘೋಷಣೆಗಳು ಕೇಳಿಬಂದವು. ಭಾರತೀಯ ಹೈಕಮಿಷನ್‌ ಕಚೇರಿಯ ಹೊರಗೂ ಪ್ರತಿಭಟಿಸಿ ಕಲ್ಲು ತೂರಾಟ ನಡೆಸಿದ್ದರು. ಇದರಿಂದ ವೀಸಾ ಅರ್ಜಿ ಸಲ್ಲಿಸುವ 2 ಕಚೇರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಷರೀಫ್ ಉಸ್ಮಾನ್ ಹಾದಿ ಅವರು ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ವಿದ್ಯಾರ್ಥಿ ಹೋರಾಟಕ್ಕೆ ನಾಯಕತ್ವ ನೀಡಿದ್ದ ಅವರು, ತಮ್ಮ ಅನೇಕ ಭಾಷಣಗಳಲಿ ಭಾರತವನ್ನ ಕುಟುವಾಗಿ ಟೀಕಿಸುತ್ತಿದ್ದರು. ಫೆಬ್ರವರಿ 2026ರಲ್ಲಿ ನಡೆಯಲಿರುವ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಹಾದಿ ಅಭ್ಯರ್ಥಿಯಾಗಿ ಸ್ಪರ್ಧೆ ಕೂಡ ಮಾಡಿದ್ದರು ಎಂದು ಹೇಳಲಾಗಿದೆ.