ಮನೆ ರಾಜ್ಯ ಕುರ್ಚಿ ಕದನ ಮಧ್ಯೆ ಡಿಕೆಶಿ ಟೆಂಪಲ್ ರನ್ – ಜಗದೀಶ್ವರಿ ದೇವಾಸ್ಥಾನದಲ್ಲಿ ವಿಶೇಷ ಪೂಜೆ

ಕುರ್ಚಿ ಕದನ ಮಧ್ಯೆ ಡಿಕೆಶಿ ಟೆಂಪಲ್ ರನ್ – ಜಗದೀಶ್ವರಿ ದೇವಾಸ್ಥಾನದಲ್ಲಿ ವಿಶೇಷ ಪೂಜೆ

0

ಕಾರವಾರ : ಅಂಕೋಲಾ ತಾಲೂಕಿನ ಆಂದ್ಲೆಯ ಶ್ರೀ ಜಗದೀಶ್ವರಿ ದೇವಸ್ಥಾನಕ್ಕೆ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ದೇವಿಯಲ್ಲಿ ಪಾರ್ಥನೆ ಸಲ್ಲಿಸಿದರು. ಆಂದ್ಲೆಗೂ ಮುನ್ನ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಡಿಸಿಎಂ ಭೇಟಿ ನೀಡಿದರು. ಮಹಾಬಲೇಶ್ವರ ಆತ್ಮಲಿಂಗ ದರ್ಶನ, ಬಿಲ್ಪತ್ರೆ, ಪಂಚಾಮೃತ ಅಭಿಷೇಕ ಮುಗಿಸಿ, ಮಹಾಗಣಪತಿ ಪೂಜಾ ಕಾರ್ಯ ಕೈಗೊಂಡು ನಂತರ ಆಂದ್ಲೆಗೆ ತೆರಳಿದರು.

ಶಲ್ಯ ಹೊದ್ದು, ರುದ್ರಾಕ್ಷಿ ತೊಟ್ಟು ಮಡಿಯಲ್ಲಿ ದೇವಾಲಯಕ್ಕೆ ಆಗಮಿಸಿದರು. ದೇವಾಲಯದ ಅರ್ಚಕ ಗಣೇಶ್ ನಾಯ್ಕ ಕುಟುಂಬದಿಂದ ಹೂಗುಚ್ಛ ನೀಡಿ ಸ್ವಾಗತ ಕೋರಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಕಾರವಾರ ಶಾಸಕ ಸತೀಶ್ ಸೈಲ್ ಅವರು ಡಿಸಿಎಂಗೆ ಸಾಥ್ ನೀಡಿದರು. ಬಳಿಕ ಡಿಕೆಶಿ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದರು.

ಗರ್ಭಗುಡಿ ಪ್ರವೇಶಿಸಿದ್ದ ಸಚಿವ ಮಂಕಾಳು ವೈದ್ಯ, ಶಾಸಕ ಸತೀಶ್ ಸೈಲ್ ಅವರನ್ನು ಡಿಕೆಶಿ ಹೊರಗೆ ಕಳುಹಿಸಿದರು. ಏಕಾಂತದಲ್ಲಿ ಅರ್ಚಕ ಗಣೇಶ್ ನಾಯ್ಕ ಅವರಿಂದ ಪೂಜಾ ಕಾರ್ಯ ಪ್ರಾರಂಭಿಸಿದರು. ಗರ್ಭಗುಡಿಯಲ್ಲಿ ಏಕಾಂಗಿಯಾಗಿ ಕುಳಿತು ಡಿಕೆಶಿ ಪೂಜೆ ನೆರವೇರಿಸಿದರು. ಆಂದ್ಲೆಯಲ್ಲಿ ಕೆಲವೇ ಕೆಲವು ಮುಖಂಡರಿಗೆ ದೇವಾಲಯಕ್ಕೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಜಗದೀಶ್ವರಿ ದೇವಿ ದರ್ಶನಕ್ಕೆ ಡಿಕೆ ಶಿವಕುಮಾರ್‌ಗೆ ಮಾತ್ರ ಪ್ರವೇಶ ಇತ್ತು. ಗರ್ಭಗುಡಿಯಲ್ಲಿ ಡಿಕೆಶಿ ಹೊರತುಪಡಿಸಿ ಇತರ ಆಪ್ತರಿಗೂ ಪ್ರವೇಶ ಇರಲಿಲ್ಲ.

ಈ ದೇವಾಲಯದಲ್ಲಿ ಕಳೆದ 6 ವರ್ಷಗಳಿಂದ ಪ್ರತಿ ಅಮಾವಾಸ್ಯೆಯಂದು ಡಿಕೆಶಿ ಹೆಸರಿನಲ್ಲಿ ಪೂಜೆ ಮಾಡಲಾಗುತ್ತಿದೆ. ಡಿಕೆಶಿ ತಮ್ಮ ಪ್ರತಿಯೊಂದು ರಾಜಕೀಯ ನಡೆಗೂ ದೇವಿಯ ಆಶೀರ್ವಾದ ಬೇಡುತ್ತಾರೆ. 2019 ರಲ್ಲಿ ಅಕ್ರಮ ಹಣ ಪತ್ತೆ ಕೇಸಲ್ಲಿ 50 ದಿನ ಜೈಲುವಾಸ ಅನುಭವಿಸಿದ್ದ ವೇಳೆ ಡಿಕೆಶಿಯವರ ತಾಯಿ ಮತ್ತು ಪತ್ನಿ ಈ ದೇವಾಲಯಕ್ಕೆ ಬಂದು ಜಾಮೀನಿಗಾಗಿ ಪ್ರಾರ್ಥಿಸಿದ್ದರು. ಡಿಕೆ ಶಿವಕುಮಾರ್‌ಗೆ 9 ದಿನದೊಳಗೆ ಜಾಮೀನು ಸಿಗುತ್ತದೆಂದು ಗಣೇಶ ನಾಯ್ಕ ಅವರು ಹೇಳಿದ್ದರಂತೆ. ಅದರಂತೆ 9 ದಿನದ ಒಳಗಾಗಿ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.