ಮನೆ ರಾಜ್ಯ ಮಹಿಳೆ ಕೊಲೆ ಪ್ರಕರಣದ ಆರೋಪ; ಜೀವಾವಧಿ ಶಿಕ್ಷೆ ರದ್ದು..!

ಮಹಿಳೆ ಕೊಲೆ ಪ್ರಕರಣದ ಆರೋಪ; ಜೀವಾವಧಿ ಶಿಕ್ಷೆ ರದ್ದು..!

0

ಬೆಂಗಳೂರು : ಬಾಗಲೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬರುವ ರಮ್ಯಾ ಎಂಬ ಮಹಿಳೆ ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದ. ಆಕೆಯ ಪತಿಗೆ ದೇವನಹಳ್ಳಿಯ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ ವಿಧಿಸಿದ್ದ, ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್‌ ರದ್ದುಗೊಳಿಸಿರುವುದು ವರದಿಯಾಗಿದೆ.

ಈ ಸಂಬಂಧಿಸಿದಂತೆ ಮೃತ ಮಹಿಳಯ ಪತಿ ಎಂ.ಅರುಣ್‌ ಕುಮಾರ್‌ (35), ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ, ತೀರ್ಪನ್ನು ಹಿರಿಯ ನ್ಯಾಯಮೂರ್ತಿ ಕೆ.ಎಸ್‌.ಮುದಗಲ್‌ ನೇತೃತ್ವದಲ್ಲಿ ವಿಭಾಗೀಯ ನ್ಯಾಯಪೀಠ ಪ್ರಕಟಿಸಿದೆ.

ಮೇಲ್ಮನವಿದಾರರ ಪರ ಹಿರಿಯ ವಕೀಲ ಸಿ.ಎಚ್‌.ಹನುಮಂತ ರಾಯ ಅವರು, ಪ್ರಕರಣದಲ್ಲಿ ಎಲ್ಲ ಆರೋಪಿಗಳ ವಿರುದ್ಧ ಒಂದೇ ತೆರನಾದ ಆಪಾದನೆ ಮಾಡಲಾಗಿತ್ತು. ಇದರಲ್ಲಿ ಉಳಿದ 11 ಆರೋಪಿಗಳನ್ನು ಈಗಾಗಲೇ ಖುಲಾಸೆಗೊಳಿಸಲಾಗಿದೆ. ಆದರೆ, ಅರ್ಜಿದಾರರನ್ನು ಮಾತ್ರ ಸಾಂದರ್ಭಿಕ ಸಾಕ್ಷ್ಯ ಆಧರಿಸಿ ಶಿಕ್ಷೆಗೆ ಗುರಿಪಡಿಸಿರುವುದು ದೋಷಪೂರಿತ ತೀರ್ಪು ಆಗಿದೆ. ಹಾಗಾಗಿ, ಶಿಕ್ಷೆ ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದರು ಎನ್ನಲಾಗಿದೆ.

ಈ ವಾದವನ್ನು ಪುರಸ್ಕರಿಸಿರುವ ನ್ಯಾಯಪೀಠ, ಪ್ರಕರಣ ಎಷ್ಟೇ ಗಂಭೀರವಾಗಿದ್ದರೂ ಕೇವಲ ಸಂಶಯವು ಸಾಕ್ಷ್ಯದ ಪರ್ಯಾಯ ಆಗಲಾರದು. ಸಾಂದರ್ಭಿಕ ಸಾಕ್ಷ್ಯಗಳ ಆಧಾರದಡಿ ದೋಷಾರೋಪಣೆ ಹೊರಿಸಲು ವಿಶ್ವಾಸಾರ್ಹ ಹಾಗೂ ದೃಢವಾದ ಸಾಕ್ಷ್ಯಗಳಿರಬೇಕು ಎಂಬುದು ಸ್ಥಾಪಿತ ತತ್ತ್ವವಾಗಿದೆ. ಹಾಗೆ ಸಾಬೀತಾದ ಸಂದರ್ಭದಗಳು ಬೇರೆ ಯಾವುದೇ ಪರಿಕಲ್ಪನೆಗೆ ಹೊಂದಿಕೊಳ್ಳುವಂತಿರಬಾರದು.

ಆದ್ದರಿಂದ, ಸಾಂದರ್ಭಿಕ ಸಾಕ್ಷ್ಯಗಳನ್ನು ಮಾತ್ರವೇ ಆಧರಿಸಿ, ಆರೋಪಿಯನ್ನು ದೋಪಿಯೆಂದು ನಿರ್ಧರಿಸುವಾಗ ವಿಚಾರಣಾ ನ್ಯಾಯಾಲಯ ಅತ್ಯಂತ ಎಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಅರ್ಜಿದಾರರನ್ನು ದೋಷಿಯೆಂದು ತೀರ್ಮಾನಿಸುವಲ್ಲಿ ವಿಚಾರಣಾ ನ್ಯಾಯಾಲಯ ತಪ್ಪು ಎಸಗಿದೆ ಎಂದು ತೀರ್ಪಿನಿಲ್ಲಿ ವಿವರಿಸಲಾಗಿದೆ.

ಭಾರತೀಯ ದಂಡ ಸಂಹಿತೆ 1860ರ ಕಲಂ 498 ಎ, 302 ಮತ್ತು 201ರ ಅಡಿಯಲ್ಲಿ ದೇವನಹಳ್ಳಿಯ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಸ ದೇವೇಂದ್ರಪ್ಪ ಎನ್‌, ಬಿರಾದಾರ ಅವರು ಅರುಣ್‌ ಕುಮಾರ್‌ಗೆ, 2024ರ ಮಾರ್ಚ್‌ 14ರಂದು ಜೀವಾವಧಿ ಶಿಕ್ಷೆ ಮತ್ತು ರೂ.75 ಸಾವಿರ ದಂಡ ವಿಧಿಸಿದ್ದರು. ಅರುಣ್‌ ಕುಮಾರ್‌ 2015ರಿಂದ ನ್ಯಾಯಾಂಗ ಬಂಧನದಲ್ಲಿದ್ದರು ಎಂದು ತಿಳಿದುಬಂದಿದೆ.