ಮೈಸೂರು(Mysuru): ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಗುರುವಾರ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿಯ ಸಭಾಂಗಣದಲ್ಲಿ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಿತು.
ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ಪ್ರಯಾಣಿಕರ ಸೇವೆಗಳ ಸುಧಾರಣೆಗೆ ಸಂಬಂಧಿಸಿದಂತೆ ಹಲವಾರು ವಿಷಯಗಳ ಕುರಿತು ಸಭೆಯಲ್ಲಿ ದಿನವಿಡೀ ಚರ್ಚೆ ನಡೆಸಲಾಯಿತು.
ಸಭೆ ಉದ್ಘಾಟಿಸಿ ಮಾತನಾಡಿದ ರಾಹುಲ್ ಅಗರ್ವಾಲ್,ಕೋವಿಡ್ ಸಾಂಕ್ರಾಮಿಕವು ಇಡೀ ಜಗತ್ತನ್ನು ಬಾಧಿಸುತ್ತಿರುವ ಸಮಯದಲ್ಲಿಯೂ 2020-21 ಹಾಗೂ 2021-22ರ ಆರ್ಥಿಕ ವರ್ಷಗಳಲ್ಲಿ ಮೈಸೂರು ವಿಭಾಗದ ಸಾಧನೆಗಳು ಗಮನಾರ್ಹ ಎಂದು ತಿಳಿಸಿದರು.
ವಿಭಾಗದಾದ್ಯಂತ ವಿವಿಧ ನಿಲ್ದಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಹಾಗು ಪ್ರಯಾಣಿಕರ ಸುರಕ್ಷತೆ ಮತ್ತು ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಮತ್ತು ಮೈಸೂರು ವಿಭಾಗವು ರೈಲು ಬಳಕೆದಾರರಿಗೆ ಉತ್ತಮ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಒದಗಿಸಲು ಬದ್ಧವಾಗಿದೆ ಎಂದು ಹೇಳಿದರು.
ದಾವಣಗೆರೆ, ಹರಿಹರ ಮತ್ತು ಹಾವೇರಿ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸುವುದು, ಮೈಸೂರಿನಿಂದ ದಾದರ್, ಅಜ್ಮೀರ್ ಮತ್ತು ನಿಜಾಮುದ್ದಿನ್ ನಿಲ್ದಾಣಗಳಿಗೆ ಈಗ ಇರುವ ಸಾಪ್ತಾಹಿಕ ಮತ್ತು ವಾರಕ್ಕೆ ಎರಡು ದಿನದ ಸೇವೆಯಿಂದ ವಾರಕ್ಕೆ ನಾಲ್ಕು ದಿನಗಳಿಗೆ ರೈಲು ಸೇವೆಗಳ ಹೆಚ್ಚಳ ಮುಂತಾದ ವಿವಿಧ ವಿಷಯಗಳ ಕುರಿತು ಸಮಿತಿಯ ಸದಸ್ಯರು ಚರ್ಚಿಸಿದರು. ಹಾಗೆಯೆ ಮೈಸೂರು-ಬೆಂಗಳೂರು ಮಧ್ಯೆ ಓಡಾಡುವ ಎಲ್ಲಾ ಸೂಪರ್ ಫಾಸ್ಟ್ ರೈಲುಗಳನ್ನು ಮತ್ತಷ್ಟು ವೇಗಗೊಳಿಸುವುದು, ಮೈಸೂರು ಮತ್ತು ಬೆಂಗಳೂರು ನಡುವೆ ಓಡುವ ಮಾಲ್ಗುಡಿ ಎಕ್ಸ್‌ಪ್ರೆಸ್‌ನಲ್ಲಿ ಹವಾ ನಿಯಂತ್ರಿತ ಬೋಗಿಗಳನ್ನು ಹೆಚ್ಚಿಸುವುದು, ಮೈಸೂರಿನಿಂದ ಹಾಸನ ಮತ್ತು ಮಂಗಳೂರು ಮೂಲಕ ಕರ್ನಾಟಕದ ಕರಾವಳಿ ಪ್ರದೇಶದೊಂದಿಗೆ ಸಂಪರ್ಕಿಸುವ ಹೊಸ ರೈಲು ಸೇವೆಗಳು, ತಾಳಗುಪ್ಪ ಮತ್ತು ಶಿವಮೊಗ್ಗ ಟೌನ್ ನಿಂದ ಚೆನ್ನೈ ಮತ್ತು ಮೈಸೂರು ಕಡೆಗೆ ಕೋವಿಡ್ ಪೂರ್ವ ಅವಧಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಎಲ್ಲಾ ರೈಲು ಸೇವೆಗಳನ್ನು ಪುನಃ ಪ್ರಾರಂಭಿಸುವುದು ಮತ್ತು ಶಿವಮೊಗ್ಗ ನಿಲ್ದಾಣದಿಂದ ಸಿಕಂದರಾಬಾದ್ ಮತ್ತು ಭುವನೇಶ್ವರದಂತಹ ವಿವಿಧ ರಾಜ್ಯಗಳ ರಾಜಧಾನಿಗಳನ್ನು ಸಂಪರ್ಕಿಸುವ ಹೊಸ ರೈಲು ಸೇವೆಗಳನ್ನು ಪ್ರಾರಂಭಿಸುವುದು ಹಾಗು ಶಿವಮೊಗ್ಗ ಸಮೀಪದ ಕೋಟೆಗಂಗೂರಿನಲ್ಲಿ ಮಂಜೂರಾಗಿರುವ ಬೋಗಿ ಆರೈಕೆ ಕೇಂದ್ರದ ಕಾಮಗಾರಿಯನ್ನು ವೇಗಗೊಳಿಸುವುದು ಮುಂತಾದ ಹಲವಾರು ಕ್ರಮಗಳಿಗೆ ವಿನಂತಿಸಲಾಯಿತು.
ಶುಚಿತ್ವ, ವಿಶೇಷ ರೈಲುಗಳ ಪ್ರಾರಂಭ, ಬೋಗಿಗಳ ಹೆಚ್ಚಳ ಸೇರಿದಂತೆ ವಿಭಾಗವು ಕೈಗೊಂಡಿರುವ ಹಲವಾರು ಅಭಿವೃದ್ಧಿ ಕಾರ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಸದಸ್ಯರುಗಳು ಮೈಸೂರು ಮತ್ತು ನಾಗನಹಳ್ಳಿ ನಿಲ್ದಾಣಗಳ ವಿಸ್ತರಣೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಮಂಜೂರಾತಿ ಪಡೆಯಲು ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದರು.