ನವದೆಹಲಿ : ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಈವರೆಗೂ ಕೇಂದ್ರ ಸರ್ಕಾರ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ, ಕೇಂದ್ರ ಹಣಕಾಸು ಆಯೋಗ ಘೋಷಿಸಿದ 11,495 ಕೋಟಿ ರೂ. ಅನುದಾನ ಬಿಡುಗಡೆ ಆಗಿಲ್ಲ ಈ ಬಾರಿಯ ಬಜೆಟ್ನಲ್ಲಾದ್ರೂ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಒತ್ತಾಯಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಕೇಂದ್ರ ಬಜೆಟ್ ಪೂರ್ವ ತಯಾರಿ ಸಭೆಯಲ್ಲಿ ಭಾಗಿಯಾದ ಅವರು, ರಾಜ್ಯದ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದರು. ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಅನುದಾನಕ್ಕೆ ಸಮನಾಗಿ ಅನುದಾನ ನೀಡಬೇಕು.
ಮಲೆನಾಡು ಕರಾವಳಿ ಭಾಗದ ಅಭಿವೃದ್ಧಿಗೆ ಹಾಗೂ ಬೆಂಗಳೂರು ಅಭಿವೃದ್ಧಿಗೆ ವೀಶೇಷ ಅನುದಾನ ನೀಡಬೇಕು. ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಪರಿಷ್ಕರಣೆ ಮಾಡಬೇಕು, 12 ವರ್ಷದಿಂದ ವೃದ್ಧರಿಗೆ, ವಿಧವೆಯರಿಗೆ ಪಿಂಚಣಿ ಏರಿಕೆಯಾಗಿಲ್ಲ, ಅದು ಏರಿಕೆಯಾಗಬೇಕು. ವಸತಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಸಹಾಯಧನ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದರು. ರಾಜ್ಯದ ಬೇಡಿಕೆ ಬಗ್ಗೆ ಮಾತನಾಡಿದ ಕೃಷ್ಣ ಬೈರೇಗೌಡ ಅವರು, ಹಿಂದೆ ಮಾಡಿದ ಮನವಿಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಈಗಲೂ ಅದನ್ನೇ ಮಾಡಬಹುದು, ಆದಾಗ್ಯೂ ನಾವು ನಿರಂತರ ಮನವಿ ಮಾಡುತ್ತಿದ್ದೇವೆ ಎಂದರು.

ಕೋಗಿಲು ಮನೆ ಸಂತ್ರಸ್ತರಿಗೆ ಮನೆ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕೃಷ್ಣ ಬೈರೇಗೌಡ, ಮನೆ ಕಳೆದುಕೊಂಡವರ ದಾಖಲಾತಿ ಪರಿಶೀಲನೆ ಆಗಬೇಕು, ಪರಿಶೀಲನೆ ಆಗದೇ ಮನೆ ನೀಡಲು ಸಾಧ್ಯವಿಲ್ಲ ಅಧಿಕಾರಿಗಳು ದಾಖಲಾತಿ ಪರಿಶೀಲನೆ ಮಾಡುತ್ತಿದ್ದಾರೆ. ಅವರ ಮೇಲೆ ಒತ್ತಡ ಹಾಕುವುದು ಸೂಕ್ತವಲ್ಲ, ಬಲವಂತ ಮಾಡಿ ಬೇಗ ಮಾಡಲು ಹೇಳಲು ಆಗುವುದಿಲ್ಲ. ಎಷ್ಟು ವರ್ಷದಿಂದ ವಾಸ ಇದ್ದಾರೆ ಎಲ್ಲ ಮಾಹಿತಿ ಸಿಗಬೇಕು ಪರಿಶೀಲನೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆ, ಬೇಗ ಮಾಡಬೇಕು ಎನ್ನುವುದು ನಮ್ಮದು ಆಶಯ ಎಂದು ಹೇಳಿದರು.
ಹಿಂದೆ ಯಶವಂತಪುರ, ಆರ್ಆರ್ ನಗರದಲ್ಲಿ ಇದೇ ರೀತಿ ಮಾನವೀಯತೆ ಆಧಾರದ ಮೇಲೆ ಮನೆ ನೀಡಿದೆ ಅದರ ಆಧಾರದ ಮೇಲೆ ನಾವು ಮನೆ ನೀಡುತ್ತಿದ್ದೇವೆ ಕ್ಯೂನಲ್ಲಿರುವ ಇತರೆ ಜನರಿಗೂ ಮನೆ ನೀಡುತ್ತೇವೆ. 50-100 ಮನೆ ಮಾನವೀಯತೆ ಮೇಲೆ ನೀಡಿದರೆ ಇತರೆ ಜನರಿಗೆ ತೊಂದರೆಯಾಗದು ಎಂದು ಹೇಳಿದರು.
ಕೇರಳದಲ್ಲಿ ಮಲಯಾಳಂ ಕಡ್ಡಾಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೇರಳ ಸಿಎಂ ಜೊತೆಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ, ಕನ್ನಡ ಭಾಷಿಕರ ಹಿತ ಕಾಯುವ ಕೆಲಸ ಮಾಡುತ್ತಿದ್ದೇವೆ. ಕಾಸರಗೂಡು ಕೇರಳದಲ್ಲಿದ್ದರು ಭಾವನಾತ್ಮಕವಾಗಿ ಕರ್ನಾಟಕಕ್ಕೆ ಸೇರಿದೆ ಇಲ್ಲಿ ತನಕ ಕೇರಳ ಕನ್ನಡಿಗರು ಶಾಂತಿಯುತವಾಗಿ ಬಂದಿದ್ದಾರೆ ಕಾನೂನು ಹೋರಾಟದ ಬಗ್ಗೆಯೂ ಪರಿಶೀಲನೆಗಳು ನಡೆಯುತ್ತಿದೆ ಎಂದರು.
ಮನರೇಗಾ ದೇಶದಲ್ಲಿ ಬಡವರಿಗೆ ಆಸರೆಯಾಗಿತ್ತು ಜೀವನಕ್ಕೆ ಭದ್ರತೆ ನೀಡಿತ್ತು, ಕನಿಷ್ಠ ಮನರೇಗಾ ಮೂಲಕ ಜನರು ಜೀವನ ಮಾಡುತ್ತಿದ್ದರು ಕೇಂದ್ರ ಸರ್ಕಾರ ಉದ್ಯೋಗದ ಹಕ್ಕನ್ನು ಕಿತ್ತುಕೊಂಡಿದೆ ಬಡವರನ್ನ ಬಡವರಾಗಿ ಉಳಿಸುವ ಯತ್ನ ಇದು. ಶ್ರೀಮಂತರಿಗೆ ಅನುಕೂಲ ಮಾಡಿಕೊಡುತ್ತಿದೆ. ರಾಜ್ಯ ಸರ್ಕಾರ, ಒಕ್ಕೂಟ ವ್ಯವಸ್ಥೆಯ ಸ್ವಾಯತ್ಯತೆ ಮೇಲೆ ಪ್ರಹಾರ ಮಾಡುತ್ತಿದೆ ಇದರಿಂದ ಎಲ್ಲ ರಾಜ್ಯಗಳಲ್ಲೂ ಹಣಕಾಸು ವ್ಯವಸ್ಥೆ ಬಿಗಡಾಯಿಸುತ್ತಿದೆ ಯೋಜನೆ ಕಾನೂನು ರಾಜ್ಯದ ಆರ್ಥಿಕ ಸ್ಥಿತಿಗೆ ಹೊರಯಾಗಲಿದೆ ಇದನ್ನು ರಾಜ್ಯ ಬಿಜೆಪಿ ನಾಯಕರು ಖಂಡಿಬೇಕಿತ್ತು ಇದನ್ನು ಬೆಂಬಲಿಸುವ ರೀತಿ ಅವರ ನೈತಿಕ ದಿವಾಳಿ ತೋರಿಸುತ್ತಿದೆ ಎಂದರು.














