ಮೈಸೂರು(Mysuru): ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷಗಳ ಬಳಿಕ ಆಷಾಢ ಮಾಸದ ಮೊದಲ ಶುಕ್ರವಾರದಂದು ನಾಡ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆಯಲು ಭಕ್ತ ಸಾಗರ ಹರಿದು ಬರುತ್ತಿದೆ.
ಇಂದು ಮುಂಜಾನೆ ಚಾಮುಂಡೇಶ್ವರಿ ತಾಯಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಿದ ಬಳಿಕ ಭಕ್ತಾದಿಗಳಿಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಕೊರೊನಾ ಕಾರಣದಿಂದಾಗಿ 2 ವರ್ಷಗಳಿಂದ ಭಕ್ತರಿಗೆ ಆಷಾಢದಲ್ಲಿ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಲಾಗಿತ್ತು. ಈ ವರ್ಷ ಭಕ್ತಾದಿಗಳಿಗೆ ಚಾಮುಂಡಿ ತಾಯಿಯ ದರ್ಶನಕ್ಕೆ ಅನುವು ಮಾಡಿಕೊಟ್ಟಿರುವುದರಿಂದ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ.
ದೇವಾಲಯದ ಒಳಾವರಣವು ವಿವಿಧ ಪುಷ್ಪಗಳ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಭಕ್ತರಿಗೆ ಸರತಿ ಸಾಲಿನಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಶೇಷ ದರ್ಶನ ಪಡೆಯಲು 300 ರೂಪಾಯಿ ಹಾಗೂ 50 ರೂಪಾಯಿಗೆ ಧರ್ಮ ದರ್ಶನಕ್ಕೆ ಅವಕಾಶವಿದೆ.
ಮೊದಲ ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ದರ್ಶನಭಕ್ತಾದಿಗಳಿಗೆ ಉಚಿತ ಬಸ್ ಸೇವೆ: ಖಾಸಗಿ ವಾಹನಗಳಿಗೆ ಸಂಚಾರ ನಿಷೇಧಿಸಲಾಗಿದ್ದು, ಬೆಟ್ಟಕ್ಕೆ ಬರುವ ಭಕ್ತರಿಗೆ ಉಚಿತವಾಗಿ ಲಲಿತ್ ಮಹಲ್ ಮೈದಾನದಿಂದ ಉಚಿತ ಬಸ್ ಸೇವೆ ಒದಗಿಸಲಾಗಿದೆ. ಮುಂಜಾನೆ 3 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬಸ್ ವ್ಯವಸ್ಥೆ ಇದೆ.
ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಅನುಮತಿ ಇರುವ ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ತಾವರೆಕಟ್ಟೆ ಸರ್ಕಲ್ನಲ್ಲೇ ಬ್ಯಾರಿಕೇಡ್ ಹಾಕಿ, ಕೆಎಸ್ಆರ್ಟಿಸಿ ಬಸ್ಗಳಲ್ಲಿ ತೆರಳುವ ಭಕ್ತರು ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದ ವಾಹನಗಳಿಗೆ ಮಾತ್ರ ಬಿಡಲಾಗುತ್ತಿದೆ.