ನವದೆಹಲಿ : ಇಡಿ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ ತಡೆ ನೀಡಿದ ಸುಪ್ರೀಂ ಕೋರ್ಟ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಂಗಾಳದ ಪೊಲೀಸರು ಮತ್ತು ಇತರರಿಗೆ ನೋಟಿಸ್ ನೀಡಿದೆ.
ಐ-ಪಿಎಸಿ ಮೇಲೆ ದಾಳಿ ನಡೆಸಿದ ಸಂಬಂಧ ಇ.ಡಿ ವಿರುದ್ಧವೇ ಎಫ್ಐಆರ್ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಸುಪ್ರೀಂ ಕೋರ್ಟ್ ಇ.ಡಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ, ಜಾರಿ ನಿರ್ದೇಶನಾಲಯದ ಮನವಿಯು ಕೇಂದ್ರ ಸಂಸ್ಥೆಗಳ ತನಿಖೆ ಮತ್ತು ರಾಜ್ಯ ಸಂಸ್ಥೆಗಳ ಹಸ್ತಕ್ಷೇಪಕ್ಕೆ ಸಂಬಂಧಿಸಿದ ಗಂಭೀರ ವಿಷಯವನ್ನು ಎತ್ತುತ್ತದೆ ಎಂದು ಹೇಳಿದೆ.
ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 8 ರಂದು ಸಾಲ್ಟ್ ಲೇಕ್ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ ಕಚೇರಿ ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ಕೋಲ್ಕತ್ತಾ ನಿವಾಸದ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆ ದಾಳಿ ನಡೆಸಿತ್ತು.
ಈ ವೇಳೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆವರಣಕ್ಕೆ ಪ್ರವೇಶಿಸಿ ತನಿಖೆಗೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಇ.ಡಿ ಆರೋಪಿಸಿತ್ತು. ಬಂಗಾಳ ಸರ್ಕಾರ, ರಾಜ್ಯ ಸಿಎಂ ಮಮತಾ ಬ್ಯಾನರ್ಜಿ, ಡಿಜಿಪಿ ರಾಜೀವ್ ಕುಮಾರ್ ಮತ್ತು ಇತರರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಐ-ಪಿಎಸಿ ಕಚೇರಿ ಮತ್ತು ಅದರ ನಿರ್ದೇಶಕ ಜೈನ್ ಅವರ ಆವರಣದ ಮೇಲೆ ದಾಳಿ ನಡೆಸಿದ ಇ.ಡಿ ಅಧಿಕಾರಿಗಳ ವಿರುದ್ಧದ ಎಫ್ಐಆರ್ಗಳನ್ನು ಸಹ ಪೀಠ ತಡೆಹಿಡಿದಿದೆ. ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಅಡ್ಡಿಪಡಿಸಿದ ಹಿನ್ನೆಲೆ ಇ.ಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.














