ಮನೆ ಸುದ್ದಿ ಜಾಲ ಟಿ20 ಲೀಗ್‌ ಸ್ಥಗಿತ, ತಮೀಮ್‌ಗೆ ಭಾರತೀಯ ಏಜೆಂಟ್ ಎಂದಿದ್ದ ಅಧಿಕಾರಿ ವಜಾ

ಟಿ20 ಲೀಗ್‌ ಸ್ಥಗಿತ, ತಮೀಮ್‌ಗೆ ಭಾರತೀಯ ಏಜೆಂಟ್ ಎಂದಿದ್ದ ಅಧಿಕಾರಿ ವಜಾ

0

ಢಾಕಾ : ಆಟಗಾರರು ದಂಗೆಗೆ ಮಣಿದ ಬಾಗ್ಲಾದೇಶ ಕ್ರಿಕೆಟ್ ಮಂಡಳಿ ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್‌ ಇಸ್ಲಾಮ್ ಅವರನ್ನು ವಜಾಗೊಳಿಸಿದೆ. ಬಾಂಗ್ಲಾದ ಮಾಜಿ ನಾಯಕ ತಮೀಮ್ ಇಕ್ಬಾಲ್‌ ಮತ್ತು ಬಾಂಗ್ಲಾ ಆಟಗಾರರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ನಜ್ಮುಲ್‌ ಅವರನ್ನು ಸ್ಥಾನದಿಂದ ಇಳಿಸಬೇಕೆಂದು ಆಟಗಾರರು ಪಟ್ಟು ಹಿಡಿದಿದ್ದರು. ಅಷ್ಟೇ ಅಲ್ಲದೇ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ ಆಡುತ್ತಿದ್ದ ಪ್ರಮುಖ ಆಟಗಾರರು ಪಂದ್ಯ ಬಹಿಷ್ಕರಿಸಿ ಪ್ರತಿಭಟಿಸಿದ ಬೆನ್ನಲ್ಲೇ ಅವರನ್ನು ಸ್ಥಾನದಿಂದ ತೆಗೆದು ಹಾಕಲಾಗಿದೆ. ನಜ್ಮುಲ್‌ ಇಸ್ಲಾಮ್ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದ್ದರೂ ಅವರು ಬಿಸಿಬಿ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.

ಬಾಂಗ್ಲಾದ ಹಿರಿಯ ಆಟಗಾರರು ಬಿಪಿಎಲ್ ಪಂದ್ಯಗಳನ್ನು ಬಹಿಷ್ಕರಿಸಿದ್ದರಿಂದ ಗುರುವಾರ ಟಾಸ್ ವಿಳಂಬವಾಗಿತ್ತು. ಮಧ್ಯಾಹ್ನ 1 ಗಂಟೆಗೆ ಆರಂಭವಾಗಬೇಕಿದ್ದ ಚಟ್ಟೋಗ್ರಾಮ್ ರಾಯಲ್ಸ್ ಮತ್ತು ನೋವಾಖಾಲಿ ಎಕ್ಸ್‌ಪ್ರೆಸ್ ನಡುವಿನ ಪಂದ್ಯವನ್ನು ಆಟಗಾರರು ಬಹಿಷ್ಕರಿಸಿದ್ದರು. ಪಂದ್ಯದ ಟಾಸ್‌ಗಾಗಿ ಮಧ್ಯಾಹ್ನ 12:30ರ ಸುಮಾರಿಗೆ ಮ್ಯಾಚ್ ರೆಫ್ರಿ ಮೈದಾನಕ್ಕೆ ಬಂದರೂ ಎರಡು ತಂಡಗಳ ನಾಯಕರು ಅಥವಾ ಆಟಗಾರರು ಮೈದಾನಕ್ಕೆ ಬರಲಿಲ್ಲ. ಕೊನೆಗೆ ರೆಫ್ರಿ ಪಂದ್ಯವನ್ನೇ ರದ್ದು ಮಾಡುವ ನಿರ್ಧಾರ ಕೈಗೊಂಡರು. ಪಂದ್ಯ ದಿಢೀರ್‌ ರದ್ದಾಗಿದ್ದಕ್ಕೆ ಅಭಿಮಾನಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಕಾರಣ ಐಪಿಎಲ್‌ನಲ್ಲಿ ಬಾಂಗ್ಲಾ ಆಟಗಾರರಿಗೆ ಆಡಲು ಅನುಮತಿ ನೀಡಬಾರದು ಎಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆಯ ಬೆನ್ನಲ್ಲೇ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಮುಸ್ತಫಿಜುರ್‌ ರೆಹಮಾನ್‌ ಅವರನ್ನು ಕೈಬಿಟ್ಟಿತ್ತು. ಈ ವಿಚಾರ ದೊಡ್ಡದಾಗಿ ಚರ್ಚೆಯಾಗುವ ಸಮಯದಲ್ಲೇ ಭಾರತದಲ್ಲಿ ಬಾಂಗ್ಲಾ ಆಟಗಾರರಿಗೆ ಭದ್ರತಾ ಆತಂಕವಿದೆ ಎಂದು ಹೇಳಿ ಫೆಬ್ರವರಿಯಲ್ಲಿ ನಡೆಯಲಿರುವ ವಿಶ್ವಕಪ್‌ ಕ್ರಿಕೆಟಿಗೆ ಭಾರತಕ್ಕೆ ತಂಡ ಕಳುಹಿಸುವುದಿಲ್ಲ ಎಂದು ಬಿಸಿಬಿ ಹೇಳಿತ್ತು. ಈ ಸಂದರ್ಭದಲ್ಲಿ ಮಾಜಿ ನಾಯಕ ತಮೀಮ್ ಇಕ್ಬಾಲ್‌ ಆಲೋಚನೆ ಮಾಡಿ ಮಹತ್ವದ ನಿರ್ಧಾರ ತೆಗೆದುಕೊಳ್ಳಿ ಎಂದಿದ್ದರು.

ಈ ಸಲಹೆ ನೀಡಿದ್ದಕ್ಕೆ ಸಿಟ್ಟಾದ ನಜ್ಮುಲ್‌ ಇಸ್ಲಾಮ್‌, ತಮೀಮ್ ಇಕ್ಬಾಲ್‌ ಭಾರತೀಯ ಏಜೆಂಟ್. ಭಾರತಕ್ಕೆ ತಂಡ ಕಳಿಸದಿದ್ದರೂ ಬಿಸಿಬಿಗೆ ಯಾವುದೇ ಆರ್ಥಿಕ ನಷ್ಟವಿಲ್ಲ. ಬಾಂಗ್ಲಾದೇಶ ಇಲ್ಲಿಯವರೆಗೆ ಯಾವುದೇ ಐಸಿಸಿ ಟ್ರೋಫಿಯನ್ನು ಗೆದ್ದುಕೊಂಡಿಲ್ಲ. ಆಟಗಾರರಿಗೆ ನಷ್ಟವಾದರೆ ಅದರ ಪರಿಹಾರವನ್ನು ನೀಡಲಾಗುವುದಿಲ್ಲ ಎಂದು ಹೇಳಿದ್ದು ಹಾಲಿ ಮತ್ತು ಮಾಜಿ ಆಟಗಾರರನ್ನು ಕೆರಳಿಸಿತ್ತು. ಈ ಕಾರಣಕ್ಕೆ ನಜ್ಮುಲ್‌ ವಜಾಕ್ಕೆ ಆಗ್ರಹಿಸಿ ಆಟಗಾರರು ಪ್ರತಿಭಸಿದ್ದರು. ನಜ್ಮುಲ್ ಇಸ್ಲಾಮ್‌ ಅವರ ವೈಯಕ್ತಿಕ ಹೇಳಿಕೆಗಳಿಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಜವಾಬ್ದಾರನಲ್ಲ, ಅಧಿಕೃತ ಮಾಧ್ಯಮ ಪ್ರಕಟಣೆ ಹೊರತುಪಡಿಸಿ ಬರುವ ಯಾವುದೇ ಹೇಳಿಕೆಗಳು ತನ್ನ ನಿಲುವಲ್ಲ ಎಂದು ಬಿಸಿಬಿ ಸ್ಪಷ್ಟನೆ ನೀಡಿದೆ.