ಬೆಂಗಳೂರು : ಬಿಜೆಪಿ ಹಿರಿಯ ಶಾಸಕ ಸುರೇಶ್ ಕುಮಾರ್ ಮನೆಗೆ ಪೋಸ್ಟರ್ ಅಂಟಿಸಿದ ಪ್ರಕರಣ ಇಂದು (ಜ.27) ವಿಧಾನಸಭೆಯಲ್ಲಿ ಸದ್ದು ಮಾಡಿತು. ಸರ್ಕಾರದ ಗಮನ ಸೆಳೆದ ಶಾಸಕರು ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಶೂನ್ಯವೇಳೆಯಲ್ಲಿ ಮಾತಾಡಿದ ಸುರೇಶ್ ಕುಮಾರ್, ತಮ್ಮ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿ ಧಮಕಿ ಹಾಕಿದ್ದಾರೆ. ನಾನು ಬೈರತಿ ಸುರೇಶ್ ಅವರಿಗೆ ಆಡಿದ ಏಳು ತಿಂಗಳಿಗೆ ಹುಟ್ಟಿದ್ದಾರೆ ಅನ್ನೋ ಮಾತು ವಾಪಸ್ ಪಡೆದಿದ್ದೆ. ಅಂದೇ ಮಾತು ವಾಪಸ್ ಪಡೆದಿದ್ದೆ, ಕಡತದಿಂದಲೂ ತೆಗೆಸಲಾಗಿತ್ತು.
ಕಾಂಗ್ರೆಸ್ ಕಾರ್ಯಕರ್ತರು ಬಂದು ನನ್ನ ಮನೆಗೆ ಪೋಸ್ಟರ್ ಹಚ್ಚಿದ್ದಾರೆ, ಸೆಲ್ಫೀ ತೆಗೆಸಿಕೊಂಡಿದ್ದಾರೆ. ನನಗೆ ರಕ್ಷಣೆ ಬೇಕು. ಸದನದಲ್ಲಿ ಮುಗಿದ ವಿಚಾರಕ್ಕೆ ಪೋಸ್ಟರ್ ಅಂಟಿಸಿದ್ದು ಸರಿಯಲ್ಲ. ದೂರು ಕೂಡ ಕೊಟ್ಟಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದೇ ವೇಳೆ ಸುರೇಶ್ ಕುಮಾರ್ ಬೆಂಬಲಕ್ಕೆ ಆರ್.ಅಶೋಕ್ ಧಾವಿಸಿದರು. ಸದನದಲ್ಲಿ ಆಗಿದ್ದು, ಕೋರ್ಟ್ ಕೂಡಾ ಪ್ರಶ್ನೆ ಮಾಡಕ್ಕಾಗಲ್ಲ. ಆದ್ರೆ ಸುರೇಶ್ ಕುಮಾರ್ ವಿರುದ್ಧ ಪೊಲೀಸರಿಗೆ ದೂರು ಕೊಡಲಾಗಿದೆ. ಇದೆಲ್ಲ ಸರಿಯಲ್ಲ, ಇದರಲ್ಲಿ ಖಡಕ್ ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಇದಕ್ಕೆ ಸ್ಪಷ್ಟನೆ ಕೊಟ್ಟ ಗೃಹ ಸಚಿವ ಪರಮೇಶ್ವರ್, ಶಾಸಕ ಸುರೇಶ್ ಕುಮಾರ್ ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಹೊಣೆ ನನ್ನದು. ನಾನೇ ಖುದ್ದಾಗಿ ಈ ಪ್ರಕರಣದ ಮೇಲೆ ನಿಗಾ ವಹಿಸ್ತೇನೆ. ಸುರೇಶ್ ಕುಮಾರ್ ವಿರುದ್ಧ ಯಾಕೆ ದೂರು ಕೊಟ್ಟಿದ್ದಾರೆ ಅಂತ ನಾನು ತಿಳಿದುಕೊಳ್ಳುತ್ತೇನೆ. ಅವರ ಮನೆಗೆ ಪೋಸ್ಟರ್ ಅಂಟಿಸಿದ್ದು ಸರಿಯಲ್ಲ. ಇದನ್ನು ನಾನೂ ಖಂಡಿಸ್ತೇನೆ. ಪೋಸ್ಟರ್ ಹಚ್ಚಿದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ಕೊಟ್ಟಿದ್ದಾರೆ.















