ಬೆಂಗಳೂರು(Bengaluru): ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ತನ್ನ ಮೂರುವರೆ ವರ್ಷದ ಕಂದಮ್ಮನಿಗೆ ನೇಣು ಬಿಗಿದು ತಾನೂ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಾಜರಾಜೇಶ್ವರಿ ನಗರದ ನಿವಾಸಿ ದೀಪಾ (31) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ರಿಯಾ ಕೊಲೆಯಾದ ಕಂದಮ್ಮ.
ಪತಿ ಅದರ್ಶ ಅವರೊಂದಿಗೆ ದೀಪಾ ಅವರು ಆರ್. ಅರ್. ನಗರದ ಚನ್ನಸಂದ್ರದ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು. ಆದರ್ಶ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ದೀಪಾ ಅವರು ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದರು. ವೈದ್ಯರಿಂದ ಚಿಕಿತ್ಸೆ ಪಡೆದಿದ್ದರು. ಆದರೂ ವಾಸಿಯಾಗಿರಲಿಲ್ಲ. ಜೂ. 30 ರಂದು ರಾತ್ರಿ ಮಗಳು ರಿಯಾಗೆ ವೇಲ್ ನಿಂದ ಫ್ಯಾನಿಗೆ ನೇಣು ಹಾಕಿ, ಆ ಬಳಿಕ ಆಕೆಯೂ ವೇಲ್ ನಿಂದ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್ ನೋಟ್ ನಲ್ಲೇನಿದೆ ?
ಆತ್ಮಹತ್ಯೆಗೂ ಮುನ್ನ ದೀಪಾ ಡೆತ್ ನೋಟ್ ಬರೆದಿಟ್ಟಿದ್ದು, ನನ್ನ ಸಾವಿಗೆ ಯಾರೂ ಕಾರಣರಲ್ಲ. ಜೀವನದಲ್ಲಿ ತುಂಬಾ ಬೇಸರಗೊಂಡಿದ್ದೇನೆ. ಅಮ್ಮಾ ಸಾರಿ, ದಿವ್ಯಾ ಲವ್ ಯೂ ಎಂದು ಸಹೋದರಿಯನ್ನು ನೆನಪಿಸಿಕೊಂಡಿದ್ದಾಳೆ.
ಅರ್.ಅರ್. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.