ಮನೆ ರಾಜ್ಯ ಮದುವೆ ಮಂಟಪಕ್ಕೆ ತೆರಳುತ್ತಿದ್ದ, ವರನಿಗೆ ಚಾಕು ಇರಿತ..!

ಮದುವೆ ಮಂಟಪಕ್ಕೆ ತೆರಳುತ್ತಿದ್ದ, ವರನಿಗೆ ಚಾಕು ಇರಿತ..!

0

ಚಾಮರಾಜನಗರ : ವಿವಾಹ ಆರತಕ್ಷತೆಗೆ ತೆರಳುತ್ತಿದ್ದ ವರ ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ. ತಾಲೂಕಿನ ಕುಣಗಳ್ಳಿ ಎಲ್.ರವೀಶ್ (34) ಚಾಕು ಇರಿತಕ್ಕೊಳಗಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಎಲ್. ರವೀಶ್​ಗೆ ಕೊಳ್ಳೇಗಾಲ ತಾಲೂಕಿನ ಹೊಸ ಅಣಗಳ್ಳಿ ಗ್ರಾಮದ ಯುವತಿಯೊಬ್ಬಳ ಜೊತೆ ವಿವಾಹ ನಿಶ್ಚಯವಾಗಿ, ಕೊಳ್ಳೇಗಾಲ ಪಟ್ಟಣದ ವೆಂಕಟೇಶ್ವರ ಮಹಲ್​ನಲ್ಲಿ ಆರತಕ್ಷತೆ ಏರ್ಪಡಿಸಲಾಗಿತ್ತು. ಆರತಕ್ಷತೆಗೆ ತೆರಳುತ್ತಿದ್ದ ಮದುಮಗನಿಗೆ ಚಾಕು ಇರಿತವಾಗಿದೆ.

ಆರತಕ್ಷತೆಗೆ ತಮ್ಮ ಗ್ರಾಮದಿಂದ ಕಾರಿನಲ್ಲಿ ಕುಟುಂಬ ಸದಸ್ಯರೊಂದಿಗೆ ತೆರಳುವಾಗ ಕೊಳ್ಳೇಗಾಲದ ಎಂಜಿಎಸ್​ವಿ ಕಾಲೇಜು ರಸ್ತೆಯ ಬಳಿ ವರ ತೆರಳುತ್ತಿದ್ದ ಕಾರನ್ನು ಹಿಂಬಾಲಿಸಿ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಎಲ್. ರವೀಶ್ ಮೇಲೆ ಚಾಕುವಿನಿಂದ ಇರಿಯಲು ಯತ್ನಿಸಿದ್ದು, ಎಡಗೈ ತೊಳಿಗೆ ಚಾಕು ಇರಿದು ರಕ್ತಸ್ರಾವವಾಗಿದೆ. ಸದ್ಯಕ್ಕೆ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ರವೀಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಮಾಧ್ಯಮದವರ ಜತೆ ಮಾತನಾಡಿ, 6 ತಿಂಗಳ ಹಿಂದೆಯಷ್ಟೇ ನನಗೆ ಹೊಸಅಣಗಳ್ಳಿ ಗ್ರಾಮದ ಯುವತಿಯ ಜೊತೆ ಎಂಗೇಜ್ಮೆಂಟ್ ಆಗಿತ್ತು. ಜ.30 ರಂದು ಮದುವೆ ನಿಶ್ಚಯವಾಗಿದ್ದರಿಂದ ಕಾರಿನಲ್ಲಿ ಕಲ್ಯಾಣ ಮಂಟಪಕ್ಕೆ ತೆರಳುವಾಗ ಹಿಂಬದಿಯಿಂದ ಮತ್ತೊಂದು ಕಾರಿನಲ್ಲಿ ಬಂದವರು ನನಗೆ ಏಕಾಏಕಿ ಚಾಕುವಿನಿಂದ ಹಲ್ಲೆ ಮಾಡಿದರು. ನನ್ನ ಮೇಲೆ ಹಲ್ಲೆ ನಡೆಸಿದವರು ಯಾರೆಂದು ಗೊತ್ತಿಲ್ಲ ಎಂದು ತಿಳಿಸಿದರು. ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ರವೀಶ್ ಬಳಿ ಘಟನೆ ವಿವರ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.