ಮೈಸೂರು: ದೇಶದ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಮತ್ತು ಮಾದರಿ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ, ದೇಶದ ಅತ್ಯುತ್ತಮ ಸ್ವಚ್ಛ ನಗರಗಳನ್ನು ಶ್ರೇಯಾಂಕಗೊಳಿಸುವ ‘ಸ್ವಚ್ಛ ಸರ್ವೇಕ್ಷಣೆ’ಯ 11ನೇ ಆವೃತ್ತಿಯ ಸಮೀಕ್ಷೆಯು ವಿಳಂಬವಾಗಿದೆ. ಈ ಬೆಳವಣಿಗೆಯು ಮೈಸೂರು ಸೇರಿದಂತೆ ದೇಶದ ಎಲ್ಲಾ ಮಹಾನಗರ ಪಾಲಿಕೆಗಳ ಒಟ್ಟು ಸಮೀಕ್ಷಾ ಪ್ರಕ್ರಿಯೆಯ ಮೇಲೆ ನೇರ ಪರಿಣಾಮ ಬೀರಲಿದೆ.
ಸಾಮಾನ್ಯವಾಗಿ ವಾರ್ಷಿಕ ಕ್ರಿಯಾಯೋಜನೆಯಂತೆ ಪ್ರತಿ ವರ್ಷ ಏಪ್ರಿಲ್ 15ರಿಂದ ರಾಷ್ಟ್ರೀಯ ಮಟ್ಟದ ಈ ಮಹತ್ವದ ಸರ್ವೇಕ್ಷಣೆ ಆರಂಭವಾಗಬೇಕಿತ್ತು. ನಿಗದಿತ ವೇಳಾಪಟ್ಟಿಯಂತೆ 2026ರ ಫೆಬ್ರವರಿ 15ರಿಂದ ಮಾರ್ಚ್ ಅವಧಿಯಲ್ಲಿ ಕ್ಷೇತ್ರೀಯ ಮೌಲ್ಯಮಾಪನ (ಫೀಲ್ಡ್ ಸರ್ವೆ), ಗಾರ್ಬೇಜ್ ಫ್ರೀ ಸಿಟಿ (ಕಸ ಮುಕ್ತ ನಗರ) ಮತ್ತು ಬಯಲು ಶೌಚಮುಕ್ತ ಪ್ರಮಾಣೀಕರಣ ಮೌಲ್ಯಮಾಪನ, ಸಿಸ್ಟಮ್ಯಾಟಿಕ್ ಡಾಕ್ಯುಮೆಂಟೇಶನ್ ಅಪ್ಲೋಡ್ ಹಾಗೂ ಫೈನಲ್ ಸರ್ವೇ ಕಾರ್ಯಗಳು ಆರಂಭವಾಗಬೇಕಿತ್ತು. ಆದರೆ, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈವರೆಗೆ ಯಾವುದೇ ಸಮೀಕ್ಷೆ ಅಥವಾ ಪರಿಶೀಲನೆಗಳು ಆರಂಭಗೊಂಡಿಲ್ಲ.
ಸಮೀಕ್ಷೆಯ ವಿಳಂಬದ ಕುರಿತು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದಿಂದ ಈವರೆಗೆ ಯಾವುದೇ ಸ್ಪಷ್ಟ ಸೂಚನೆಗಳು ಹೊರಬಿದ್ದಿಲ್ಲ. ಇದರಿಂದಾಗಿ ದೇಶಾದ್ಯಂತದ ನಗರ ಪಾಲಿಕೆಗಳಲ್ಲಿ ಗೊಂದಲ ಉಂಟಾಗಿದೆ. ಆದಾಗ್ಯೂ, ಮೈಸೂರು ಮಹಾನಗರ ಪಾಲಿಕೆ ಸೇರಿದಂತೆ ಹಲವು ಸ್ಥಳೀಯ ಸಂಸ್ಥೆಗಳು ಸರ್ವೇಕ್ಷಣೆಯನ್ನು ಎದುರಿಸಲು ತಮ್ಮದೇ ಆದ ಸಿದ್ಧತೆಗಳನ್ನು ಮುಂದುವರಿಸಿವೆ.
ಸಮೀಕ್ಷೆ ತಡವಾಗುತ್ತಿರುವುದರಿಂದ ಪಾಲಿಕೆಗಳಿಗೆ ತಯಾರಿಗೆ ಹೆಚ್ಚಿನ ಸಮಯಾವಕಾಶ ಸಿಕ್ಕಂತಾಗಿದೆ. ಬಾಕಿ ಇರುವ ಕೆಲಸಗಳನ್ನು ಮತ್ತಷ್ಟು ಅಚ್ಚುಕಟ್ಟಾಗಿ ಪೂರ್ಣಗೊಳಿಸಲು ಇದು ಸಹಕಾರಿ.ಒಂದು ವೇಳೆ ಮೇ ಅಥವಾ ಜೂನ್ ತಿಂಗಳಲ್ಲಿ ಸಮೀಕ್ಷೆ ಆರಂಭವಾದರೆ, ಆಗ ಮಳೆಗಾಲ ಶುರುವಾಗುವುದರಿಂದ ಮಳೆ ಸಂಬಂಧಿತ ಕಾಮಗಾರಿಗಳತ್ತ ಪಾಲಿಕೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಇದರಿಂದ ಸ್ವಚ್ಛತೆಯ ಮೇಲಿನ ಗಮನ ಬೇರೆಡೆಗೆ ಸರಿಯುವ ಸಾಧ್ಯತೆ ಇದೆ. ಅಲ್ಲದೆ, ಈಗಾಗಲೇ ನಿರಂತರವಾಗಿ ಸಿದ್ಧತೆಯಲ್ಲಿ ತೊಡಗಿರುವ ಸಿಬ್ಬಂದಿ ಉತ್ಸಾಹ ಕಳೆದುಕೊಳ್ಳುವ ಭೀತಿಯೂ ಇದೆ.
10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರ ಪಾಲಿಕೆಗಳ ವರ್ಗದಲ್ಲಿ ಮೈಸೂರು ಮಹಾನಗರ ಪಾಲಿಕೆಯು ಕಳೆದ ಎರಡು ಬಾರಿಯೂ ಟಾಪ್-3 ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಅಲ್ಲದೆ, ‘ಸೂಪರ್ ಸ್ವಚ್ಛ ಲೀಗ್’ನಲ್ಲಿಯೂ ಪ್ರಮುಖ ಸ್ಥಾನ ಪಡೆದಿದೆ. ಈ ಬಾರಿಯೂ ತನ್ನ ಸ್ಥಾನವನ್ನು ಉಳಿಸಿಕೊಳ್ಳುವುದಲ್ಲದೆ, ಶ್ರೇಯಾಂಕದಲ್ಲಿ ಮತ್ತಷ್ಟು ಉನ್ನತ ಸ್ಥಾನಕ್ಕೇರಲು ಮೈಸೂರು ಪಾಲಿಕೆ ತೀವ್ರ ಸಿದ್ಧತೆ ನಡೆಸುತ್ತಿದೆ.















