ಮನೆ ರಾಜ್ಯ ಮೆಟ್ರೋ ಜಟಾಪಟಿ; ʻಕಾಂಗ್ರೆಸ್‌ ಸರ್ಕಾರ ಖಾಲಿ ಟ್ರಂಕ್‌ ಸರ್ಕಾರʼ ಟ್ರಂಕ್‌ ಹಿಡ್ಕೊಂಡು ಬಂದ – ತೇಜಸ್ವಿ...

ಮೆಟ್ರೋ ಜಟಾಪಟಿ; ʻಕಾಂಗ್ರೆಸ್‌ ಸರ್ಕಾರ ಖಾಲಿ ಟ್ರಂಕ್‌ ಸರ್ಕಾರʼ ಟ್ರಂಕ್‌ ಹಿಡ್ಕೊಂಡು ಬಂದ – ತೇಜಸ್ವಿ ಸೂರ್ಯ

0

ಬೆಂಗಳೂರು : ಮೆಟ್ರೋ ದರ ಏರಿಸಿದ್ದನ್ನು ಖಂಡಿಸಿ ಆರ್‌ವಿ ಮೆಟ್ರೋ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಜಯನಗರದ ಶಾಸಕ ರಾಮಮೂರ್ತಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸರು ನೋಟಿಸ್‌ ನೀಡಿದ್ದರೂ ಇಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಖಾಲಿ ಟ್ರಂಕ್‌ ಹಿಡಿದುಕೊಂಡು ಬಂದ ತೇಜಸ್ವಿ ಸೂರ್ಯ ಟ್ರಂಕ್‌ ತೆರೆದು ರಾಜ್ಯ ಸರ್ಕಾರ ಖಾಲಿಯಾಗಿದೆ ಎಂದು ಹೇಳಿದರು.

ನಾನು ಪ್ರತಿಭಟನೆ ಮಾಡುತ್ತಿಲ್ಲ. ಖಾಲಿ ಟ್ರಂಕ್‌ ಹಿಡಿದು ಪ್ರತಿಭಟನೆ ನಡೆಸುತ್ತಿದ್ದೇನೆ. ನನ್ನನ್ನು ಯಾರೂ ತಡೆಯಬಾರದು ಎಂದರು. ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆದಾಗ, ನಾನು ಖಾಲಿ ಟ್ರಂಕ್‌ ಹಿಡಿದುಕೊಂಡಿದ್ದೇನೆ. ಸಂಸತ್ತು ಅಧಿವೇಶನ ನಡೆಯುತ್ತಿದ್ದಾಗ ನನ್ನನ್ನು ವಶಕ್ಕೆ ಪಡೆಯುವಂತಿಲ್ಲ. ಕಾನೂನು ತಿಳಿದುಕೊಂಡು ವಶಕ್ಕೆ ಪಡೆಯಿರಿ ಎಂದರು. ತೇಜಸ್ವಿ ಸೂರ್ಯ ಅವರನ್ನು ವಶಕ್ಕೆ ಪಡೆದ ಪೊಲೀಸರು ಟ್ರಂಕ್‌ ಮೇಲಿದ್ದ ಕಾಂಗ್ರೆಸ್‌ ಸರ್ಕಾರ ಖಾಲಿ ಟ್ರಂಕ್‌ ಸರ್ಕಾರ ಪೋಸ್ಟರ್‌ ತೆಗೆದರು.

ಬಿಜೆಪಿಯ ಮೌನ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ರಾಮಮೂರ್ತಿ ಅವರು, ದರ ಏರಿಕೆಗೆ ತಾತ್ಕಾಲಿಕ ತಡೆ ಆಗಿದೆ. ದರ ಏರಿಕೆ ಕೂಡಲೇ ಕೈ ಬಿಡಬೇಕು. ಈಗಿರುವ ದರವನ್ನೂ ಕಡಿಮೆ ಮಾಡಬೇಕು. ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಸಿಟ್ಟು ಹೊರಹಾಕಿದರು. ಬಿಜೆಪಿ ಪ್ರತಿಭಟನೆ ನಡೆಸುವ ವಿಚಾರ ತಿಳಿದು ಮೊದಲೇ ಸರ್ಕಾರ ಆರ್‌ವಿ ಮೆಟ್ರೋ ನಿಲ್ದಾಣದಲ್ಲಿ 20ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿತ್ತು. ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಿ ಭದ್ರತೆ ನೀಡಿತ್ತು. ನಿಲ್ದಾಣದ ಹೊರಗೆ ಬಿಎಂಆರ್‌ಸಿಎಲ್‌ ಭದ್ರತಾ ವಿಭಾಗದ ಸಿಬ್ಬಂದಿಯೂ ನಿಂತಿದ್ದರು.