ಚಿತ್ರದುರ್ಗ : ಬೇಸಿಗೆ ಬಂತೆಂದರೆ ಎಲ್ಲೆಡೆ ನೀರಿನ ಹಾಹಾಕಾರ ಮೊಳಗೋದು ಸಹಜ. ಆದರೆ ಜನರೇನೋ ಅಗತ್ಯ ನೀರನ್ನು ವಿವಿಧ ಮೂಲಗಳಿಂದ ಕೇಳಿ ಪಡೆಯುತ್ತಾರೆ. ಆದರೆ ಚಿತ್ರದುರ್ಗದ ಕಾಯ್ದಿಟ್ಟ ಜೋಗಿಮಟ್ಟಿ ಅರಣ್ಯಧಾಮದಲ್ಲಿನ ಪ್ರಾಣಿಪಕ್ಷಿಗಳು ನೀರಿಲ್ಲದೇ ಕಂಗಾಲಾಗಿವೆ.
ಚಿತ್ರದುರ್ಗದ ಜೋಗಿಮಟ್ಟಿ ವನ್ಯಧಾಮದಲ್ಲಿ ಬೇಸಿಗೆ ಬಂತೆಂದರೆ ಚಿತ್ರದುರ್ಗದ ಸುತ್ತಮುತ್ತಲಿನ ಕೆರೆಕಟ್ಟೆಗಳು ಬತ್ತಿಬರಿದಾಗಲಿವೆ. ಅದರಲ್ಲೂ ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿ ಇರುವ ಜೋಗಿಮಟ್ಟಿ ಗಿರಿಧಾಮದಲ್ಲಿ ಹನಿ ನೀರಿಗೂ ತಾತ್ಪರ ಎದುರಾಗಲಿದೆ. ಹೀಗಾಗಿ ಬೇಸಿಗೆ ಆರಂಭದಲ್ಲೇ ಇಲ್ಲಿನ ವನ್ಯಜೀವಿಗಳು ಕುಡಿಯುವ ನೀರಿಗಾಗಿ ಪರದಾಡುವ ವಾತಾವರಣ ನಿರ್ಮಾಣವಾಗಿದೆ.
ವನ್ಯಜೀವಿ ಸಂಕುಲ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಕೆಲವಡೆ ಅವೈಜ್ಞಾನಿಕ ನೀರಿನ ವ್ಯವಸ್ಥೆ ಕಲ್ಪಿಸಿದೆ. ಜೋಗಿಮಟ್ಟಿ ಮುಖ್ಯ ರಸ್ತೆಯಲ್ಲಿ ನೀರಿನ ಕೃತಕ ತೊಟ್ಟಿಗಳಿರುವ ಪರಿಣಾಮ ಆ ಅರವಟ್ಟಿಗೆಗಳು ನಿರುಪಯುಕ್ತವಾಗಿವೆ. ಕಾಡಿನೊಳಗೆ ಪ್ರಾಣಿ, ಪಕ್ಷಿಗಳ ಸಂಚಾರದ ಸ್ಥಳಗಳಲ್ಲಿ ಅಗತ್ಯ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಪರಿಸರವಾದಿಗಳು ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆ ಅರವಟ್ಟಿಗೆಗಳು ಕೆಲವಡೆ ನೀರಿಲ್ಲದೇ ಖಾಲಿಯಾಗಿದ್ದು, ಸ್ವಚ್ಛತೆ ಕೂಡ ಮರೀಚಿಕೆಯಾಗಿದೆ. ಕಲುಷಿತಗೊಂಡ ನೀರನ್ನು ಸೇವಿಸುವುದರಿಂದ ಪ್ರಾಣಿಗಳ ಜೀವಕ್ಕೆ ಹಾನಿಯಾಗುವ ಆತಂಕ ಹೆಚ್ಚಾಗಿದೆ. ಹೀಗಾಗಿ ಆ ಕೃತಕ ಹೊಂಡಗಳನ್ನು ಕೂಡಲೇ ಸ್ವಚ್ಛಗೊಳಿಸಿ, ಟ್ಯಾಂಕರ್ ಮೂಲಕ ನೀರನ್ನು ಭರ್ತಿಮಾಡಬೇಕು. ಮೂಕಜೀವಿಗಳ ನೀರಿನ ಬವಣೆ ನೀಗಿಸಬೇಕು. ಜೀವಹಾನಿಯಾಗದಂತೆ ವನ್ಯಜೀವಿಗಳನ್ನು ಸಂರಕ್ಷಿಸಬೇಕೆಂದು ಪ್ರಾಣಿಪ್ರಿಯರು ಆಗ್ರಹಿಸಿದ್ದಾರೆ.















