ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಅವರ ವೃತ್ತಿಜೀವನ ಈಗ ಸುವರ್ಣ ಕಾಲದಲ್ಲಿದೆ. ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಚಿತ್ರರಂಗದಲ್ಲಿ ಮಿಂಚುತ್ತಿರುವ ಈ ಸೌತ್ ಸುಂದರಿ ಈಗ ತಮ್ಮ ಸಂಭಾವನೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡು ಮುಖ್ಯಮಂತ್ರಿ ಆಗಿರುವ ವಿಜಯ್ ಜೊತೆ ತ್ರಿಶಾ ಅವರು ಆಪ್ತವಾಗಿದ್ದಾರೆ. ವಿಜಯ್ ಅವರ ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆಯೇ ತ್ರಿಶಾ ಜನಪ್ರಿಯತೆ ಕೂಡ ಡಬಲ್ ಆಗಿದೆ. ಅದಕ್ಕೆ ತಕ್ಕಂತೆ ಅವರಿಗೆ ದೊಡ್ಡ ದೊಡ್ಡ ಅವಕಾಶಗಳು ಸಿಗುತ್ತಿವೆ. ಆದ್ದರಿಂದ ಸಂಭಾವನೆ ಕೂಡ ಜಾಸ್ತಿ ಆಗುತ್ತಿದೆ ಎನ್ನಲಾಗಿದೆ.
ಈಗೀನ ವರ್ಷಗಳಲ್ಲಿ ‘ಪೊನ್ನಿಯಿನ್ ಸೆಲ್ವನ್’ ಮತ್ತು ‘ಲಿಯೋ’ ರೀತಿಯ ದೊಡ್ಡ ಚಿತ್ರಗಳ ನಂತರ ತ್ರಿಶಾ ಅವರ ಮಾರುಕಟ್ಟೆ ಮೌಲ್ಯ ಗಣನೀಯವಾಗಿ ಹೆಚ್ಚಿದೆ. ಸದ್ಯ ಕಾಲಿವುಡ್ ಮತ್ತು ಟಾಲಿವುಡ್ನ ದೊಡ್ಡ ಬಜೆಟ್ ಚಿತ್ರಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಮೂಲಗಳ ಪ್ರಕಾರ, ತ್ರಿಶಾ ಈಗ ಪ್ರತಿ ಚಿತ್ರಕ್ಕೆ ಸುಮಾರು 10ರಿಂದ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಮೂಲಕ ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಅವರು ಅಗ್ರಸ್ಥಾನಕ್ಕೇರಿದ್ದಾರೆ. ತ್ರಿಶಾ ಕೈಯಲ್ಲಿ ಈಗ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳಿವೆ. ಚಿರಂಜೀವಿ ಅಭಿನಯದ ‘ವಿಶ್ವಂಭರ’ ಸಿನಿಮಾಗೆ ತ್ರಿಶಾ ನಾಯಕಿ ಆಗಿದ್ದಾರೆ. ಸೂರ್ಯ ಅಭಿನಯದ ‘ಕರುಪ್ಪು’ ಸಿನಿಮಾದಲ್ಲಿ ಕೂಡ ತ್ರಿಶಾ ನಟಿಸಿದ್ದಾರೆ. ಕಮಲ್ ಹಾಸನ್ ಹಾಗೂ ರಜನಿಕಾಂತ್ ಕಾಂಬಿನೇಷನ್ನ ಹೊಸ ಸಿನಿಮಾಗೂ ಅವರೇ ನಾಯಕಿ ಆಗುವ ಸಾಧ್ಯತೆ ಇದೆ. ಹೊಸ ಹೊಸ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ ಎನ್ನಬಹುದು.
ಆದರಿಂದ ಕೇವಲ ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗದೆ, ನಟನಾ ಪ್ರಾಧಾನ್ಯತೆಯ ಪಾತ್ರಗಳ ಮೂಲಕವೂ ತ್ರಿಶಾ ಗಮನ ಸೆಳೆಯುತ್ತಿದ್ದಾರೆ. ಚಿತ್ರರಂಗಕ್ಕೆ ಹೊಸ ನಟಿಯರ ಆಗಮನವಾಗುತ್ತಿದ್ದರೂ, ತ್ರಿಶಾ ಅವರ ಬೇಡಿಕೆ ಕುಗ್ಗಿಲ್ಲದಿರುವುದು ವಿಶೇಷ. ಈಗಿನ ಸಂಭಾವನೆ ಏರಿಕೆಯು ಅವರ ಜನಪ್ರಿಯತೆ ಮತ್ತು ನಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಅವರು ಹಲವು ವರ್ಷಗಳಿಂದ ಆಪ್ತವಾಗಿದ್ದಾರೆ. ಅವರ ಒಡನಾಟದ ಬಗ್ಗೆ ಸಾಕಷ್ಟು ಗಾಸಿಪ್ಗಳಿವೆ. ಇತ್ತೀಚೆಗೆ ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ತ್ರಿಶಾ ಮತ್ತು ವಿಜಯ್ ಅವರು ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಈ ಎಲ್ಲ ಕಾರಣಗಳಿಂದ ಅವರು ಹೆಚ್ಚು ಸುದ್ದಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

















