ನೆಲಮಂಗಲ : ಕೆನಡಾದಲ್ಲಿ ಕನ್ನಡಿಗನನ್ನು ಬರ್ಬರ ಕೊಲೆ ಮಾಡಲಾಗಿದೆ. ಬೆಂಗಳೂರಿನ ನೆಲಮಂಗಲ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್(37) ಕಾರಿನಲ್ಲಿ ತೆರಳುತ್ತಿದ್ದಾಗ ಹತ್ತಾರು ಬಾರಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.
ಕೆನಡಾದಲ್ಲಿ ಕನ್ನಡ ಡಿಂಡಿಮವನ್ನು ಸಾರುತ್ತಿದ್ದ ಚಂದನ್ ಕುಮಾರ್ ಎಲ್‌ಎನ್‌ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 6 ವರ್ಷದಿಂದ ಕೆನಡಾದಲ್ಲಿದ್ದ ಚಂದನ್ ಅವರ ಪೋಷಕರಿಗೆ ನಿನ್ನೆ ಟೊರೊಂಟೋ ಪೊಲೀಸರು ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಮೃತ ಚಂದನ್ ತಂದೆ ನಿವೃತ್ತ ಶಿಕ್ಷಕ ನಂದ ಕುಮಾರ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ರಾತ್ರಿ 8 ಗಂಟೆಗೆ ಚಂದನ್ ಮೃತಪಟ್ಟಿದ್ದಾನೆ ಎಂಬ ಸುದ್ದಿ ಬಂತು. ಮೊನ್ನೆ ಶುಕ್ರವಾರ ಕಡೆಯದಾಗಿ ಮಾತನಾಡಿದ್ದ. ಹುಡುಗಿಯನ್ನು ನೋಡಿ ಮದುವೆ ಮಾಡುವ ಆಸೆ ಇತ್ತು. ಕೆಲಸದಿಂದ ರಜೆ ಪಡೆದು ಬರುತ್ತೇನೆ ಎಂದಿದ್ದ. ನನಗೆ ಏನು ಹೇಳಬೇಕು ಎನ್ನುವುದು ಗೊತ್ತಾಗುತ್ತಿಲ್ಲ.
ಮಗನ ಮೃತ ದೇಹ ನಮ್ಮ ಮನೆಗೆ ಕರೆ ತರುವ ಕೆಲಸ ಮಾಡಿ ಎಂದು ಅವರು ಭಾರತ ಸರ್ಕಾರಕ್ಕೆ ಮನವಿ ಮಾಡಿದರು. ಯಾವುದೇ ಮಾಹಿತಿ ಸಿಗದೇ ಕುಟುಂಬಸ್ಥರು ಪರದಾಡುತ್ತಿದ್ದಾರೆ. ಭಾರತದ ಮಣ್ಣಲ್ಲೇ ಆತನ ಮೃತದೇಹ ಅಂತ್ಯಸಂಸ್ಕಾರ ಮಾಡುವ ಆಸೆ ಪೋಷಕರಿಗೆ ಇದೆ. ಕೆನಡಾದಿಂದ ಮೃತದೇಹವನ್ನು ಭಾರತಕ್ಕೆ ತರುವುದು ಹೇಗೆ ಎಂಬ ಚಿಂತೆಯಲ್ಲಿ ಪೋಷಕರಿದ್ದಾರೆ.















