ಮನೆ ಸುದ್ದಿ ಜಾಲ ಶಕ್ತಿಸೌಧ ವಿಧಾನಸೌಧದಲ್ಲೇ 300 ಗ್ರಾಂ ಚಿನ್ನಾಭರಣ, 1.5 ಲಕ್ಷ ರೂ. ಕಳ್ಳತನ..!

ಶಕ್ತಿಸೌಧ ವಿಧಾನಸೌಧದಲ್ಲೇ 300 ಗ್ರಾಂ ಚಿನ್ನಾಭರಣ, 1.5 ಲಕ್ಷ ರೂ. ಕಳ್ಳತನ..!

0

ಬೆಂಗಳೂರು : ಶಕ್ತಿಸೌಧ ವಿಧಾನಸೌಧದಲ್ಲಿರುವ ನಗರಾಭಿವೃದ್ಧಿ ಸಚಿವ ಸುರೇಶ್‌ ಅವರ ಕಚೇರಿಯಲ್ಲೇ ಕಳ್ಳತನ ನಡೆದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಕೆಲಸದ ನಿಮಿತ್ತ ಸಚಿವರ ಕಚೇರಿಗೆ ನವೀನ್ ಎಂಬವರು ಚಿನ್ನಾಭರಣ ಹಾಗೂ ನಗದು ಇದ್ದ ಕೈ ಚೀಲದೊಂದಿಗೆ ಬಂದಿದ್ದರು. ಕೆಲಸ ಮುಗಿಸಿದ ತೆರಳುವಾಗ ಕೈ ಚೀಲವನ್ನು ಮರೆತು ಹೋಗಿದ್ದರು.

ಮಾರನೇ ದಿನ ಬಂದು ನೋಡಿದಾಗ ಕೈ ಚೀಲ ನಾಪತ್ತೆಯಾಗಿತ್ತು. 300 ಗ್ರಾಂ ಚಿನ್ನಾಭರಣ , 1.5 ಲಕ್ಷ ರೂ. ಕ್ಯಾಶ್ ಇದ್ದ ಕೈ ಚೀಲ ಕಳ್ಳತನವಾದ ಬೆನ್ನಲ್ಲೇ ಗಾಬರಿಗೊಂಡ ನವೀನ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಸಚಿವರ ಕಚೇರಿಯಲ್ಲೇ ಕಳ್ಳತನ ನಡೆದ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ವಿಧಾನಸೌಧದ ಆಡಳಿತಾತ್ಮಕ ಮತ್ತು ಭದ್ರತಾ ವಿಷಯಗಳಿಗೆ ಸಂಬಂಧಿಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆಯ ಡಿ ಗ್ರೂಪ್ ನೌಕರನ ಪಾತ್ರ ಗೊತ್ತಾಗಿದೆ. ನೌಕರ ಕೈ ಚೀಲ ಹಿಡಿದುಕೊಂಡು ಹೋಗುವುದು ಸಿಸಿಟಿವಿಯಲ್ಲಿ ಪತ್ತೆಯಾದ ಬೆನ್ನಲ್ಲೇ ವಿಧಾನಸೌಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದರೂ ಈಗ ಹಲವು ಪ್ರಶ್ನೆಗಳು ಎದ್ದಿದೆ. ಪರಿಶೀಲನೆ ನಡೆಸದೇ ಚಿನ್ನಾಭರಣ, ನಗದನ್ನು ವಿಧಾನಸೌಧದ ಒಳಗಡೆ ಭದ್ರತಾ ಸಿಬ್ಬಂದಿ
ಬಿಟ್ಟಿದ್ದು ಯಾಕೆ? ಮೆಟಲ್ ಡಿಟೆಕ್ಟರ್, ತಪಾಸಣೆ ಕೇವಲ ನೆಪಕ್ಕೆ ಮಾತ್ರ ಇದೆಯೇ? ಸಚಿವರ ಕಚೇರಿಯಲ್ಲಿನ ಕಳ್ಳತನ ಭದ್ರತಾ ವೈಫಲ್ಯದ ಪ್ರತೀಕವೇ ಎಂಬ ಗಂಭೀರ ಪ್ರಶ್ನೆ ಎದ್ದಿದೆ.