ಮನೆ ರಾಜ್ಯ ಮಾ.5 ರಂದು ಬೆಂಗಳೂರಲ್ಲಿ ಬೃಹತ್‌ ಪ್ರತಿಭಟನೆಗೆ ಗುತ್ತಿಗೆದಾರರ ಸಂಘ ಕರೆ..!

ಮಾ.5 ರಂದು ಬೆಂಗಳೂರಲ್ಲಿ ಬೃಹತ್‌ ಪ್ರತಿಭಟನೆಗೆ ಗುತ್ತಿಗೆದಾರರ ಸಂಘ ಕರೆ..!

0

ಮಡಿಕೇರಿ : ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರ 37 ಸಾವಿರ ಕೋಟಿ ಹಣ ಬಾಕಿಯಿದೆ. ಅಲ್ಲದೇ 2018 ರಲ್ಲಿ ಕೊಡಗಿನ ಪ್ರಾಕೃತಿಕ ವಿಕೋಪ ಯೋಜನೆ ಅಡಿಯಲ್ಲಿ ಕಾಮಗಾರಿ ನಿರ್ವಹಿಸಿದ್ದ ಗುತ್ತಿಗೆದಾರರ 180 ಕೋಟಿ ಹಣವನ್ನೂ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ಆಕ್ರೋಶ ಹೊರಹಾಕಿದರು.

ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಳೆದ ಎರಡೂವರೆ ವರ್ಷಗಳಿಂದ ಯಾವುದೇ ಗುತ್ತಿಗೆ ಕೆಲಸಗಳನ್ನೂ ನೀಡುತ್ತಿಲ್ಲ. ಈ ಹಿಂದಿನ ವರ್ಷಗಳಲ್ಲಿ ಕಾಮಗಾರಿ ನಡೆಸಿದ ಹಣವನ್ನೂ ಬಿಡುಗಡೆ ಮಾಡಿಲ್ಲ. ಆದ್ದರಿಂದ ರಾಜ್ಯ ಗುತ್ತಿಗೆದಾರರ ಸಂಘವು ಎಲ್ಲಾ ಕಾಮಗಾರಿಗಳನ್ನ ಸ್ಥಗಿತಗೊಳಿಸಿ ಮಾರ್ಚ್‌ 5 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಮುಷ್ಕರ ನಡೆಸಲಿದೆ ಎಂದು ಎಚ್ಚರಿಸಿದ್ರು.

ಕಾಮಗಾರಿ ನಿರ್ವಹಿಸಿದ್ದ ಬಾಕಿ ಬಿಲ್ ಬಿಡುಗಡೆ ಮಾಡಲು ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕ ಪರ್ಸೆಂಟ್‌ ಕಮಿಷನ್‌ ನೀಡಬೇಕಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿಯೇ ಹೆಚ್ಚಾಗಿದೆ. ಕಳೆದ 3 ವರ್ಷಗಳಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, 37 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಬಾಕಿ ಬಿಡುಗಡೆಗೆ ಎಷ್ಟು ಪರ್ಸೆಂಟೇಜ್ ಹಣ ನೀಡಬೇಕಾಗಿದೆ ಎಂಬುದನ್ನ ಈಗ ಹೇಳುವುದಿಲ್ಲ.

ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಗುತ್ತಿಗೆದಾರರ ಮತ್ತು ಹಿರಿಯ ಅಧಿಕಾರಿಗಳ ಸಭೆ ಕರೆಯಲಿ. ಆ ಸಭೆಯಲ್ಲಿ ಯಾವುದೇ ಮುಚ್ಚು ಮರೆಯಿಲ್ಲದೇ ಎಲ್ಲ ಮಾಹಿತಿ ನೀಡುತ್ತೇವೆ ಎಂದರು. ಗುತ್ತಿಗೆದಾರರ ಕಷ್ಟಗಳನ್ನು ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ. 3 ವರ್ಷಗಳಿಂದ ಸರ್ಕಾರ ಬಾಕಿ ಬಿಲ್ ಬಿಡುಗಡೆ ಮಾಡದ ಕಾರಣ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ, ಬಡ್ಡಿ ಪಾವತಿಸಲಾಗದೇ ವಿಷ ಕುಡಿಯುವ ಸ್ಥಿತಿಗೆ ತಲುಪಿದ್ದಾರೆ.

ಲೋಕೋಪಯೋಗಿ, ಜಲ ಸಂಪನ್ಮೂಲ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಗುತ್ತಿಗೆದಾರರಿಗೆ 37 ಸಾವಿರ ಕೋಟಿ ರೂಪಾಯಿ ಬಾಕಿ ಬಿಲ್ ಬಿಡುಗಡೆ ಮಾಡಬೇಕಿದೆ. ಕೊಡಗು ಜಿಲ್ಲೆಯಲ್ಲೂ 2018 ರಲ್ಲಿ ನಡೆದ ಪ್ರಾಕೃತಿಕ ವಿಕೋಪದ ಅಡಿಯಲ್ಲಿ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಸುಮಾರು 180 ಕೋಟಿ ರೂಪಾಯಿ ಬಾಕಿ ಬಿಲ್ ಬಿಡುಗಡೆಯಾಗಬೇಕಿದೆ ಎಂದು ಸರ್ಕಾರ ಕೂಡಲೇ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.