ಬೆಂಗಳೂರು: ವಿಧ್ವಂಸಕ ಕೃತ್ಯಗಳು ನಡೆದಾಗ ತುರ್ತಾಗಿ ಕೈಗೊಳ್ಳಬೇಕಾದ ಭದ್ರತಾ ಕಾರ್ಯಾಚರಣೆ ಬಗ್ಗೆ ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ಜಿ) ಕಮಾಂಡೋಗಳು, ನಗರ ಪೊಲೀಸರ ನೆರವಿಂದ ವಿಧಾನಸೌಧ ಆವರಣದಲ್ಲಿ ಅಣಕು ಕಾರ್ಯಾಚರಣೆ ನಡೆಸಿದರು. ಕೇಂದ್ರ ಸರ್ಕಾರದ ಸೂಚನೆಯಂತೆ ಬುಧವಾರ ಸಂಜೆ 4ರಿಂದ ರಾತ್ರಿ 8ರವರೆಗೆ ವಿಧಾನಸೌಧದಲ್ಲಿ ಅಣಕು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಉಗ್ರ ಚಟುವಟಿಕೆ ನಡೆದಾಗ ಕೈಗೊಳ್ಳಬೇಕಾದ ಕ್ರಮಗಳು, ಸಿದ್ಧತೆ, ಕಾರ್ಯ ವೈಖರಿ ಹಾಗೂ ಭದ್ರತಾ ತಪಾಸಣೆ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ತಾಲೀಮು ನಡೆಸಲಾಯಿತು ಎನ್ನಲಾಗುತ್ತಿದೆ.
ಈ ಕುರಿತು ವಿಧಾನಸೌಧ ಆವರಣದಲ್ಲಿ ಬಾಂಬ್ ಸ್ಫೋಟಿಸಿ ನಾಲ್ವರು ಭಯೋತ್ಪಾದಕರು ಒಳನುಗ್ಗುವ ಸನ್ನಿವೇಶ ಸೃಷ್ಟಿಸಲಾಯಿತು. ನೈಜವಾಗಿ ಆಗಿರುವಂತೆ ಬಿಂಬಿಸಿ ಬಾಂಬ್ ಪತ್ತೆ, ನಿಷ್ಕ್ರಿಯ ದಳ ಹಾಗೂ ಶ್ವಾನದಳ, ಗರುಡಾ ಪಡೆ, ಕ್ಷಿಪ್ರ ಕಾರ್ಯಪಡೆಗಳು ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದವು. ಉಗ್ರರು ಒಳನುಗುತ್ತಿದ್ದಂತೆ ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರು ಹಾಗೂ ಸಿಬ್ಬಂದಿಗಳನ್ನ ಎನ್ಎಸ್ಜಿ ಪಡೆಗಳು ಹೊರಗೆ ಕಳುಹಿಸಿತು. ಮತ್ತೊಂದೆಡೆ ವಿಧಾನಸೌಧ ಪ್ರವೇಶಿಸುವ ಎಲ್ಲಾ ದ್ವಾರಗಳನ್ನ ಮುಚ್ಚಲಾಗಿತ್ತು. ಎನ್ಎಸ್ಜಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ತನ್ನದೇ ಶೈಲಿಯಲ್ಲಿ ಆಪರೇಷನ್ ಕಾರ್ಯಾಚರಣೆ ಕೈಗೊಂಡಿತು. ಹೆಲಿಕಾಪ್ಟರ್ ಮೂಲಕ ಬಂದಿಳಿದ ಎನ್ಜಿಎಸ್ ಸಿಬ್ಬಂದಿಯು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಒಳನುಸುಳಿದ್ದವರನ್ನು ಬಂಧಿಸುವ ತಾಲೀಮು ನಡೆಸಲಾಯಿತು ಎನ್ನಬಹುದು.

















