ಮನೆ ರಾಷ್ಟ್ರೀಯ ಭಾರತದ ಜವಳಿ ಉತ್ಪನ್ನಗಳಿಗೂ ಅಮೆರಿಕದಲ್ಲಿ 0% ಸುಂಕ; ಪಿಯೂಷ್ ಗೋಯಲ್

ಭಾರತದ ಜವಳಿ ಉತ್ಪನ್ನಗಳಿಗೂ ಅಮೆರಿಕದಲ್ಲಿ 0% ಸುಂಕ; ಪಿಯೂಷ್ ಗೋಯಲ್

0

ನವದೆಹಲಿ : ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಬಾಂಗ್ಲಾದೇಶಕ್ಕೆ ವಿಸ್ತರಿಸಿದಂತೆಯೇ ಭಾರತವು ಜವಳಿ ಉತ್ಪನ್ನಗಳಿಗೆ ಶೂನ್ಯ ಸುಂಕ ಪ್ರಯೋಜನ ಪಡೆಯುವ ಸಾಧ್ಯತೆಯಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಆದರೆ, ಭಾರತ – ಅಮೆರಿಕ ಒಪ್ಪಂದದ ಜಂಟಿ ಹೇಳಿಕೆಯಾಗಲಿ ಅಥವಾ ಶ್ವೇತಭವನ ಫ್ಯಾಕ್ಟ್‌ಶೀಟ್ ಆಗಲಿ ಈ ಷರತ್ತನ್ನ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ವ್ಯಾಪಾರ ಒಪ್ಪಂದದಲ್ಲಿ ಬಾಂಗ್ಲಾದೇಶವು ಭಾರತಕ್ಕಿಂತ ಹೆಚ್ಚಿನ ಪ್ರಯೋಜನ ಪಡೆದುಕೊಂಡಿದೆ ಎಂಬ ರಾಹುಲ್‌ ಗಾಂಧಿ ಆರೋಪಗಳನ್ನ ತಿರಸ್ಕರಿಸಿದರು. ರಾಹುಲ್‌ ಗಾಂಧಿ ಅವರು ಸಂಸತ್ತಿನಲ್ಲಿ ಮತ್ತೆ ಸುಳ್ಳು ಹರಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅಮೆರಿಕವು, ಬಾಂಗ್ಲಾದೇಶದ ಸರಕುಗಳ ಮೇಲಿನ ಪ್ರತಿಸುಂಕವನ್ನು ಶೇ.19 ಕ್ಕೆ ಇಳಿಸಲಿದೆ. ಆದರೆ, ಅಮೆರಿಕದ ಹತ್ತಿ ಬಳಸಿ, ಯಂತ್ರಗಳ ನೆರವಿಲ್ಲದೇ ಸಿದ್ಧಪಡಿಸಿದ ನೂಲಿನಿಂದ ತಯಾರಿಸಿದ ಜವಳಿ ಉತ್ಪನ್ನಗಳಿಗೆ ಮಾತ್ರ ಶೂನ್ಯ ಸುಂಕ ವಿಧಿಸಲಿದೆ ಎಂದಿದ್ದಾರೆ.

ಈಗ ಬಾಂಗ್ಲಾದೇಶದ ಜವಳಿ ಉತ್ಪನ್ನಕ್ಕೆ ಅಮೆರಿಕದಲ್ಲಿ ಶೇ.31ರಷ್ಟು ಸುಂಕ (ಅತ್ಯಂತ ನೆಚ್ಚಿನ ರಾಷ್ಟ್ರವೆಂಬ ಕಾರಣಕ್ಕೆ ಶೇ 12ರಷ್ಟು ಸುಂಕ ಮತ್ತು ಪ್ರತಿಸುಂಕದ ರೂಪದಲ್ಲಿ ಶೇ 19ರಷ್ಟು ಸುಂಕ) ಇದೆ. ಬಾಂಗ್ಲಾದೇಶವು ಅಮೆರಿಕದ ನೂಲು ಬಳಸಿದರೆ ಸುಂಕವು ಶೇ.12ಕ್ಕೆ ಇಳಿಕೆ ಆಗಲಿದೆ. ಅಮೆರಿಕ-ಭಾರತದ ಅಂತಿಮ ವ್ಯಾಪಾರ ಒಪ್ಪಂದದಲ್ಲಿ ಬಾಂಗ್ಲಾದೇಶವು ಪಡೆದ ಪ್ರಯೋಜನವನ್ನೇ ಭಾರತವು ಸಹ ಪಡೆಯಲಿದೆ ಎಂದು ಗೋಯಲ್ ಹೇಳಿದ್ದಾರೆ.

ಭಾರತದ ಕಂಪನಿಗಳು ಅಮೆರಿಕದಿಂದ ನೂಲು ಮತ್ತು ಹತ್ತಿಯನ್ನ ಖರೀದಿಸಿ, ಉತ್ಪನ್ನಗಳನ್ನ ತಯಾರಿಸಿ ಅಮೆರಿಕದ ಮಾರುಕಟ್ಟೆಗೆ ರಫ್ತು ಮಾಡಿದರೆ, ಅಮೆರಿಕದಲ್ಲಿ ಶೂನ್ಯ ಸುಂಕದ ಪ್ರಯೋಜನ ದೊರೆಯಲಿದೆ. ಇದು ದೇಶದ ಹತ್ತಿ ಬೆಳೆಗಾರರ ಮೇಲೆ ಯಾವುದೇ ಪರಿಣಾಮ ಬೀರದು ಎಂದು ತಿಳಿಸಿದ್ದಾರೆ.

ಮಧ್ಯಂತರ ಒಪ್ಪಂದದಿಂದ ಅನೇಕ ಉತ್ಪನ್ನಗಳನ್ನ ಅಮೆರಿಕ, ಯುರೋಪಿಯನ್ ಯೂನಿಯನ್, ಯುಕೆ, ಸ್ವಿಟ್ಜರ್ಲೆಂಡ್, ನಾರ್ವೆ ಮತ್ತು ಆಸ್ಟ್ರೇಲಿಯಾಕ್ಕೆ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ. ಈ ಪ್ರಯೋಜನ ದೇಶದ ರೈತರು ಪಡೆಯುತ್ತಾರೆ. ಅಲ್ಲದೇ 5 ಲಕ್ಷ ಕೋಟಿ ರೂ. ಇರುವ ರಫ್ತಿನ ಪ್ರಮಾಣ 10 ಲಕ್ಷ ಕೋಟಿ ರೂ.ಗೆ ಏರಿಕೆ ಆಗುತ್ತದೆ. ರಾಹುಲ್ ಗಾಂಧಿ ಭಾರತದ ರೈತರು, ಮೀನುಗಾರರು, ಎಂಎಸ್‌ಎಂಇಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ವಿಶ್ವಕರ್ಮರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.