ಚೆನ್ನೈ : ತಮಿಳುನಾಡು ಚುನಾವಣೆಗೆ ಮೊದಲೇ ಡಿಎಂಕೆ ಸರ್ಕಾರ ಮಹಿಳೆಯರ ಖಾತೆಗೆ 5 ಸಾವಿರ ರೂ. ಹಣವನ್ನು ಜಮೆ ಮಾಡಿದೆ. ಕಲೈಗ್ನಾರ್ ಮಗಲಿರ್ ಉರಿಮೈ ತೊಗೈ ಯೋಜನೆಯಡಿ 1.31 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲಾ 5 ಸಾವಿರ ರೂ. ಜಮೆಯಾಗಿದೆ. ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಹಣದ ಜೊತೆ ಬೇಸಿಗೆ ಸಮಯದಲ್ಲಿ ನೆರವಾಗಲು 2 ಸಾವಿರ ರೂ. ಹಣವನ್ನು ಹಾಕಲಾಗಿದೆ.
ವಿಧಾನಸಭಾ ಚುನಾವಣೆ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಏರಿದರೆ ದ್ರಾವಿಡ 2.0 ಸರ್ಕಾರದ ಅಡಿಯಲ್ಲಿ ಫಲಾನುಭವಿಗಳಿಗೆ ನೀಡಲಾಗುವ ತಿಂಗಳ ಮೊತ್ತವನ್ನು 2 ಸಾವಿರ ರೂ.ಗೆ ಏರಿಸಲಾಗುವುದು ಸಿಎಂ ಎಂ.ಕೆ. ಸ್ಟಾಲಿನ್ ಭರವಸೆ ನೀಡಿದ್ದಾರೆ.
ಕಲೈಗ್ನರ್ ಮಗಲಿರ್ ಉರಿಮೈ ತೊಗೈ ಯೋಜನೆಯನ್ನು ಸೆಪ್ಟೆಂಬರ್ 2023 ರಲ್ಲಿ ಪ್ರಾರಂಭಿಸಲಾಗಿತ್ತು. ಆರಂಭದಲ್ಲಿ 1.13 ಕೋಟಿ ಮಹಿಳೆಯರಿಗೆ 1 ಸಾವಿರ ರೂ. ನೀಡಲಾಗಿತ್ತು. ಈಗ ರಾಜ್ಯಾದ್ಯಂತ 1.31 ಕೋಟಿ ಮಹಿಳೆಯರಿಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಕಳೆದ ತಿಂಗಳು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯ ಮೊದಲ ಪಟ್ಟಿಯಲ್ಲಿ ಇದೇ ರೀತಿಯ ಭರವಸೆಯನ್ನು ನೀಡಿದ್ದರು.














