ಬಳ್ಳಾರಿ : ಮೂರು ದಿನಗಳ ಕಾಲ ನಡೆಯಲಿರುವ ಹಂಪಿ ಉತ್ಸವದಲ್ಲಿ ಫಲಪುಷ್ಟ ಹಾಗೂ ವಸ್ತು ಪ್ರದರ್ಶನ ನಡೆಯುತ್ತಿದ್ದು, ಹೂವಿನಲ್ಲಿಯೇ ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಸೃಷ್ಟಿಸಿದ್ದಾರೆ. ಹಂಪಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಬಂದಿರುವ ಪ್ರವಾಸಿಗರು ವಸ್ತು ಪ್ರದರ್ಶನ ಜೊತೆಗೆ ಹೂವಿನಲ್ಲಿ ನಿರ್ಮಾಣವಾಗಿರುವ ವಿಜಯನಗರ ಸಾಮ್ರಾಜ್ಯವನ್ನು ಕಣ್ತುಂಬಿಕೊಂಡಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಂಪಿ ಉತ್ಸವದಲ್ಲಿ ವಸ್ತು ಪ್ರದರ್ಶನ ಕಣ್ಮನ ಸೆಳೆಯುತ್ತದೆ. ಗುಲಾಬಿ ಹಾಗೂ ಸೇವಂತಿ ಹೂವಿನಲ್ಲಿಯೇ ವಿಜಯನಗರ ಸಾಮ್ರಾಜ್ಯದ ಗತವೈಭವ ಅರಳಿದೆ. ಹೂವಿನಲ್ಲಿಯೇ ಬಡವಿಲಿಂಗ, ಸಾಸಿವೆ ಕಾಳು ಗಣಪ, ಶ್ರೀಕೃಷ್ಣದೇವರಾಯ, ವಿಜಯನಗರ ಸಾಮ್ರಾಜ್ಯದ ಲಾಂಛನ ಮೂಡಿಬಂದಿದೆ.
ಈ ಬಾರಿ ಅರಣ್ಯ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯಿಂದಲೂ ವಿಭಿನ್ನ ಪ್ರಯತ್ನ ಮಾಡಲಾಗಿದ್ದು, ಅರಣ್ಯ ಇಲಾಖೆಯಿಂದ ದರೋಜಿ ಕರಡಿ ಧಾಮ ಹಾಗೂ ಮೀನುಗಾರಿಕೆ ಇಲಾಖೆಯಿಂದ 33 ಗೇಟ್‌ಗಳುಳ್ಳ ಟಿಬಿ ಡ್ಯಾಂ ನಿರ್ಮಾಣ ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳೆಲ್ಲವೂ ವಸ್ತು ಪ್ರದರ್ಶನದಲ್ಲಿ ನೋಡುವ ಅವಕಾಶ ಕಲ್ಪಿಸಲಾಗಿದ್ದು, ಸಾವಿರಾರು ಪ್ರವಾಸಿಗರು ಖುಷಿಯಿಂದ ವಸ್ತು ಪ್ರದರ್ಶನ ವೀಕ್ಷಣೆ ಮಾಡ್ತಿದ್ದಾರೆ.















