ಸುಖ ದಾಂಪತ್ಯ ನಡೆಸುವ ಜೋಡಿಗೆ ಆದರ್ಶ ದಂಪತಿಗಳು ಎನ್ನುತ್ತಾರೆ ಆದರೆ ಅದರ ರಹಸ್ಯದ ಮಹತ್ವದ ಕುರಿತು ಅರಿತು ಬಾಳುವಲ್ಲಿ ಅದೆಷ್ಟು ವಿದ್ಯಾವಂತರೂ ಸಹ ಎಡವಿಬಿಟ್ಟಿದ್ದಾರೆ ಎಂಬುದೇ ವಿಪರ್ಯಾಸ.
ದಾಂಪತ್ಯ ಸುಖ ಯಾರಿಗೆ ಬೇಡ, ಎಲ್ಲರೂ ಬಯಸುವಂತಹ ಸುಖ ಆ ಸುಖಕ್ಕೆ ಇವರು ಪಾತ್ರಧಾರಿಗಳು ಆಗಬೇಕೆಂದರೆ ಅದಕ್ಕೆ ತಕ್ಕನಾದ ಸಖ ಸಖಿ ಗಳು ಅವಶ್ಯಕ ಎಂಬುದು ಆ ತುಡಿವ ಮನಸ್ಸುಗಳಿಗೆ ಏಕೆ ಅರ್ಥವಾಗುವುದಿಲ್ಲವೋ? ಅದೆಷ್ಟೋ ದಾಂಪತ್ಯ ಸುಖಕ್ಕೆ ಸೂತ್ರಗಳು ಎಂದೋ ಬಂದು ಹೋಗಿವೆ. ಅದೆಷ್ಟೋ ತಲೆಮಾರಿನ ಹಿರಿಯರು ದಾಂಪತ್ಯದ ಬಗ್ಗೆ ಗುಟ್ಟುಗಳನ್ನು ಹೇಳಿ ಹೋಗಿದ್ದಾರೆ. ಹಾಗಿದ್ದರೂ ಸಹ ಅದನ್ನು ಅನುಕರಣೆ ಮಾಡಿ ಅನುಸರಿಸುವಲ್ಲಿ ಎಡವುತ್ತಿದ್ದಾರೆ. ಹಾಗಿದ್ದರೆ ಆ ರಹಸ್ಯ ಏನು ಬನ್ನಿ ನೋಡೋಣ.
ನಾನು ಎಂಬ ನಾನತ್ವ Fallen in love :
ಒಂದು ಪದ ಇದೆ I am fall in love. ಇದೇನಪ್ಪಾ ದಾಂಪತ್ಯಸುಖಕ್ಕೆ ಈ ಪದಕ್ಕೂ ಇರುವ ವ್ಯತ್ಯಾಸ ಅಂತ ಯೋಚಿಸುತ್ತಿದ್ದೀರಾ ? ಖಂಡಿತಾ ಇದೆ. ಪ್ರೀತಿಯಲ್ಲಿ ಫಾಲ್ ಇನ್ ಲವ್ ಅಂದ್ರೆ ಯಾರು ಏಳೋದಿಲ್ಲ ಅಥವಾ ಪ್ರೀತಿಯಲ್ಲಿ ಹಾರುವುದು ಇಲ್ಲ ಪ್ರೀತಿಯಲ್ಲಿ ನಡೆಯುವುದೂ ಇಲ್ಲ ಪ್ರೀತಿಯಲ್ಲಿ ನಿಲ್ಲುವುದೂ ಇಲ್ಲ.ಅದು ಪ್ರೀತಿಯಲ್ಲಿ ಬೀಳುವುದು ಎಂದರ್ಥ.
ನಿಮಗೆ ನಿಮ್ಮ ಜೀವನದಲ್ಲಿ ಎಂದಾದರೂ ನಿಮಗಿಂತಲೂ ಬೇರೆ ಇನ್ಯಾರೋ ತುಂಬಾ ಪ್ರಮುಖರಾಗಿದ್ದಾರೆ ಎಂದರೆ ನೀವು ಅವರಿಗೆ ತೋರುವ ಗೌರವ ನಾನು ಎಂಬ ನಾನತ್ವವನ್ನು ತೊರೆದು ಅವರಲ್ಲಿ ಒಂದಾಗುವುದು ಎಂದರ್ಥ. ನಾನು ಎಂಬ ನಾನತ್ವ ವು ನಿಮ್ಮಿಂದ ಕಳಚಿಬಿದ್ದಾಗ ನಿಮ್ಮ ಆಂತರ್ಯದಲ್ಲಿ ಪ್ರೀತಿಯ ಚಿಗುರು ಗಾಢವಾಗಿ ಬೇರೂರಿರುತ್ತದೆ.
ಅರ್ಥೈಸಿಕೊಳ್ಳುವ ಸೌಜನ್ಯತೆಯ ಶ್ರಮ :
ನಾವು ಯಾರೊಡನೆಯಾದರೂ ಗಾಢವಾದ ಸಂಬಂಧವನ್ನು ಹೊಂದಿದಾಗ ಅವರನ್ನು ಅರ್ಥೈಸಿಕೊಳ್ಳಲು ಹೆಚ್ಚು ಶ್ರಮ ಪಡಬೇಕಾಗುತ್ತದೆ. ಒಬ್ಬ ವ್ಯಕ್ತಿ ನಮಗೆ ಹತ್ತಿರವಾಗುವುದು, ಪ್ರೀತಿಪಾತ್ರರಾದವರನ್ನು ನಾವು ಚೆನ್ನಾಗಿ ಅರ್ಥೈಸಿಕೊಂಡಾಗ ಮಾತ್ರ. ಅವರನ್ನು ನೀವು ಅರ್ಥೈಸಿಕೊಂಡಷ್ಟು ಅವರ ಸಾಮೀಪ್ಯವನ್ನು ನೀವು ಆನಂದಿಸುವಿರಿ.
ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳು :
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕೆಲವು ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳಿರುತ್ತವೆ. ಹೆಚ್ಚಾಗಿ ಋಣಾತ್ಮಕತೆಯಿಂದಾಗಿ ಸಂಬಂಧವು ಏಳು-ಬೀಳಿನಲ್ಲಿ ನಲುಗಿಹೋಗುತ್ತದೆ. ಇಲ್ಲವೇ ಸಂಬಂಧ ಕಡಿದು ಹೋಗುತ್ತದೆ. ನಾನು ಎಂಬುದು ಸಂಬಂಧದಲ್ಲಿ ಒಬ್ಬ ಮನುಷ್ಯನನ್ನು ಒಂಟಿಯನ್ನಾಗಿಸುತ್ತದೆ. ಧನಾತ್ಮಕ ಭಾವನೆಯನ್ನು ನಾವು ನಮ್ಮದು ಎಂಬ ನಡೆ ನುಡಿಗಳು ಸಂಬಂಧವನ್ನು ಒಗ್ಗೂಡಿಸುತ್ತದೆ.
ವಿವಾಹ ದಾಂಪತ್ಯ ಮರೆತು ಬಿಡುವಂಥದ್ದಲ್ಲ :
ವಿವಾಹವು ಒಮ್ಮೆ ಕೈಗೊಂಡು ನಂತರ ಮರೆತುಬಿಡುವಂತಹ ವಿಷಯ ಖಂಡಿತವಾಗಿಯೂ ಅಲ್ಲ . ಅದು ಎರಡು ಜೀವಗಳ ಬೆಸುಗೆಗೆ ಮಿಲನವಾಗಿರುತ್ತದೆ. ಎರಡು ಪ್ರತ್ಯೇಕ ಜೀವಗಳು ಒಂದು ಸಾಮಾನ್ಯ ಉದ್ದೇಶದಿಂದ ಜೊತೆಗಿರುವ ಆಯ್ಕೆಯನ್ನು ಮಾಡಿಕೊಳ್ಳುವುದೇ ದಾಂಪತ್ಯ ವಾಗಿರುತ್ತದೆ. ತಮ್ಮ ಸುಖ ಸಂತೋಷ ವಂಶವೃದ್ಧಿಸುವುದಕ್ಕಾಗಿ ಒಟ್ಟಾಗಿ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಇದು ದೇವರ ಪ್ರಕೃತಿದತ್ತ ವಿಶಿಷ್ಟ ಕೊಡುಗೆಯೂ ಹೌದು.
ಮೊದಲು ನಿಮ್ಮನ್ನು ನೀವು ಕಂಡುಕೊಳ್ಳಿ :
ಸಂಬಂಧಗಳು ನಿಜವಾಗಲೂ ಸುಂದರವಾಗಿರಬೇಕೆಂದರೆ ಬೇರೆಯವರನ್ನು ಕಂಡುಕೊಳ್ಳುವ ಮೊದಲೇ ವ್ಯಕ್ತಿ ಅಂತರ್ಮುಖಿಯಾಗಿ ತನ್ನನ್ನು ತಾನೇ ಅತ್ಯಂತ ಗಾಢವಾಗಿ ಅವಲೋಕಿಸಿಕೊಳ್ಳಬೇಕಾದ್ದು ಇಲ್ಲಿ ಬಹಳ ಮುಖ್ಯ. ನೀವೇ ಒಂದು ಆನಂದದ ಒರತೆಯ ಮೂಲವಾಗಿದ್ದರೆ ಮತ್ತು ನಿಮ್ಮ ಸಂಬಂಧವು ಆನಂದವನ್ನು ಹೆಚ್ಚಿಸಿಕೊಳ್ಳುವತ್ತ ದಾಪುಗಾಲಿಡುತ್ತದೆ. ಆಗ ನೀವು ಯಾರೊಡನೆ ಬೇಕಾದರೂ ಅದ್ಭುತವಾದ ಸಂಬಂಧವನ್ನು ಹೊಂದಬಹುದು. ನೀವು ಇನ್ನೊಂದು ಜೀವದ ಜೊತೆ ಸಮೃದ್ಧ ಬಾಳ್ವೆಯ ಅನುಭವವನ್ನು ಪಡೆಯಲು ನೀವು ಅಪೇಕ್ಷಿಸುವುದೇ ಆದರೆ ನಿಮ್ಮ ಸಂಗಾತಿಯ ಬಗ್ಗೆ ಕೂಲಂಕುಷವಾಗಿ ಅರಿತಿರಬೇಕು. ಆಗ ವಿವಾಹ ಎನ್ನುವುದು ಬರೀ ಒಂದು ಏರ್ಪಾಡು ಆಗಿರುವುದಿಲ್ಲ ಅದು ಒಂದು ಐಕ್ಯತೆಯಾಗಿರುತ್ತದೆ. ಆಗ ನಿಮ್ಮ ದಾಂಪತ್ಯ ಜೀವನ ನೂರ್ಕಾಲ ಬಾಳುತ್ತದೆ.
ಅಪೇಕ್ಷಿಸದೆ ಅರ್ಪಿಸಿ :
ದಾಂಪತ್ಯದಲ್ಲಿ ಸಂಗಾತಿಯಿಂದ ಸಂತೋಷವನ್ನು ಹೇಗೆ ಪಡೆದುಕೊಳ್ಳುವುದು? ಅವರು ಹೇಗೆ ನಮ್ಮ ಬಾಳನ್ನು ಸ್ವರ್ಗವಾಗಿಸಬಲ್ಲರು ?ಎಂಬಿತ್ಯಾದಿ ನಿರೀಕ್ಷಣೆಗಳ ಹಾಸಿಗೆಯ ಮೇಲೆ ಪವಡಿಸದಿರಿ. ಏಕೆಂದರೆ ಖಂಡಿತವಾಗಲೂ ನೀವು ನಿರಾಶೆಗೆ ಒಳಗಾಗುತ್ತೀರಿ. ಮದುವೆ ಸ್ವರ್ಗದಲ್ಲೇ ನಿಶ್ಚಯಿಸಲ್ಪಟ್ಟಿರುತ್ತದೆ ಎಂದು ಹೇಳುತ್ತಾರೆ. ಹಾಗೆಂದುಕೊಂಡೆ ಎಷ್ಟೋ ಜನ ತಮ್ಮ ಸುಂದರ ಸಂಸಾರವನ್ನು ನರಕವಾಗಿಸಿಕೊಂಡಿದ್ದಾರೆ. ಹಾಗಾಗಿ ಸಂಗಾತಿಯಿಂದ ಏನನ್ನಾದರೂ ಪಡೆಯುವುದಕ್ಕಾಗಿಯೇ ನಿಮ್ಮ ಸಂಬಂಧಗಳು ಉಂಟಾಗಿದ್ದಲ್ಲಿ ನೀವು ಶ್ರಮವಹಿಸಿ ನಿರ್ವಹಿಸಿದರು ಅದು ಎಷ್ಟೇ ಪ್ರೀತಿ ಪಾತ್ರರಾದರು ಅಲ್ಲಿ ನಿರಂತರವಾಗಿ ಸಮಸ್ಯೆಗಳು ಇದ್ದೇ ಇರುತ್ತವೆ. ಅದೇ ನಿಮ್ಮ ಸಂಬಂಧ ನಿಮ್ಮ ಸಂಗಾತಿಗೆ ನಿವೇದನೆ ಎಂತಾದರೆ ಆಗ ಎಲ್ಲವೂ ಸುಖಕರವಾಗಿರುತ್ತದೆ.
ಅವರಿಂದ ಏನನ್ನೂ ಅಪೇಕ್ಷಿಸದೆ ನೀವು ನಿಮ್ಮನ್ನೂ ನಿಮ್ಮ ಪ್ರೀತಿಯನ್ನು ಅರ್ಪಿಸಿದಲ್ಲಿ ಸುಂದರ ದಾಂಪತ್ಯ ನಿಮ್ಮ ಗೂಡಾಗಿರುತ್ತದೆ.