ನವದೆಹಲಿ (New Delhi): ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಎನ್‌ಡಿಎಯಿಂದ ಉಪರಾಷ್ಟ್ರಪತಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆಗಸ್ಟ್ 6 ರಂದು ಉಪರಾಷ್ಟ್ರಪತಿ ಚುನಾವಣೆಗೆ ದಿನಾಂಕ ನಿಗದಿದ್ದು, ಹಲವಾರು ನಾಯಕರ ಹೆಸರು ಅಭ್ಯರ್ಥಿ ರೇಸ್‌ನಲ್ಲಿ ಕೇಳಿ ಬರುತ್ತಿದೆ. ಉಪರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಾತ್ರವಲ್ಲ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್, ಮುಖ್ತಾರ್ ಅಬ್ಬಾಸ್ ನಕ್ವಿ ಹೆಸರು ಸಹ ಕೇಳಿ ಬರುತ್ತಿದೆ. ಬಿಜೆಪಿ ಯಾರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಿದೆ ಎನ್ನುವುದು ನಿಗೂಢವಾಗಿದೆ.
80 ವರ್ಷದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಉಪರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಅವರ ಕಚೇರಿ ಹೇಳಿದೆ. ಎರಡು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾಂಗ್ರೆಸ್ ಪಕ್ಷ ತೊರೆದು ಪಂಜಾಬ್ ಲೋಕ ಕಾಂಗ್ರೆಸ್ (ಪಿಎಲ್‌ಸಿ) ಪಕ್ಷವನ್ನು ಸ್ಥಾಪನೆ ಮಾಡಿದ್ದರು. 2022ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರು.
ಪಂಬಾಜ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಂಜಾಬ್ ಲೋಕ ಕಾಂಗ್ರೆಸ್ (ಪಿಎಲ್‌ಸಿ) ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸುವ ಸಾಧ್ಯತೆ ಇದೆ. ಪಕ್ಷವನ್ನು ವಿಲೀನಗೊಳಿಸುವ ಕುರಿತು ಅವರು ಪಕ್ಷದ ನಾಯಕರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ.
ಸದ್ಯ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗಾಗಿ ಅವರು ಲಂಡನ್‌ನಲ್ಲಿದ್ದಾರೆ. ಭಾನುವಾರ ಕ್ಯಾಪ್ಟನ್ ಅಮರಿಂದರ್ ಸಿಂಗ್‌ಗೆ ಶಸ್ತ್ರಚಿಕಿತ್ಸೆ ನಡೆಯಲಿದೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ಉಪರಾಷ್ಟ್ರಪತಿ ಚುನಾವಣೆ ಬಗ್ಗೆ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ. ಜೊತೆಗೆ ಲಂಡನ್ ನಿಂದ ವಾಪಸ್ ಆದ ಬಳಿಕ ಪಕ್ಷ ವಿಲೀನ ಪ್ರಕ್ರಿಯೆಗಳಿಗೆ ಚಾಲನೆ ನೀಡಲಿದ್ದಾರೆ ಎಂಬ ಮಾಹಿತಿ ಇದೆ. ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಜುಲೈ 19 ಕೊನೆಯ ದಿನವಾಗಿದೆ.
ಮತ್ತೊಂದೆಡೆ ಎನ್‌ಡಿಎ ಪ್ರಸ್ತುತ ಉಪರಾಷ್ಟ್ರಪತಿಯಾಗಿರುವ ವೆಂಕಯ್ಯ ನಾಯ್ಡು ಅವರಿಗೆ ಮತ್ತೊಂದು ಅವಧಿಗೆ ಅವಕಾಶ ನೀಡಲಿದೆ ಎಂಬ ಸುದ್ದಿಯೂ ಇದೆ. ಆದರೆ ವೆಂಕಯ್ಯ ನಾಯ್ಡು ಅವರೇ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ ಎಂಬ ಸುದ್ದಿಗಳೂ ಇವೆ.
ಉಪರಾಷ್ಟ್ರಪತಿಯಾಗುವವರು ರಾಜ್ಯಸಭೆ ಸಭಾಪತಿಯಾಗಿಯೂ ಕೆಲಸ ಮಾಡಲಿದ್ದಾರೆ. ಉಪರಾಷ್ಟ್ರಪತಿ ಆಯ್ಕೆಗೆ ಲೋಕಸಭೆ, ರಾಜ್ಯಸಭೆ ಸದಸ್ಯರು ಮಾತ್ರ ಮತದಾನ ಮಾಡಲಿದ್ದಾರೆ. ಲೋಕಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಹೊಂದಿದೆ. ಆದ್ದರಿಂದ ಎನ್‌ಡಿಎ ಅಭ್ಯರ್ಥಿಯಾಗಿ ಯಾರನ್ನೇ ಆಯ್ಕೆ ಮಾಡಿದರೂ ಗೆಲುವು ಸಾಧಿಸುವುದು ಸುಲಭವಾಗಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಉಪರಾಷ್ಟ್ರಪತಿಯಾಗಲಿದ್ದಾರೆಯೇ? ಕಾದು ನೋಡಬೇಕಿದೆ.
ಪ್ರಸ್ತುತ ಉಪರಾಷ್ಟ್ರಪತಿಯಾಗಿರುವ ವೆಂಕಯ್ಯ ನಾಯ್ಡು ಅವಧಿ ಆಗಸ್ಟ್ 10ರಂದು ಮುಕ್ತಾಯಗೊಳ್ಳಲಿದೆ. ಆದ್ದರಿಂದ ನೂತನ ಉಪರಾಷ್ಟ್ರಪತಿ ಆಯ್ಕೆಗೆ ಚುನಾವಣಾ ಆಯೋಗ ವೇಳಾಪಟ್ಟಿ ಘೋಷಣೆ ಮಾಡಿದೆ. ಆಗಸ್ಟ್ 6ರಂದು ಚುನಾವಣೆ ನಡೆಯಲಿದೆ. ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಜುಲೈ 19 ಕೊನೆಯ ದಿನವಾಗಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಜುಲೈ 12ರಂದು ಭಾರತಕ್ಕೆ ವಾಪಸ್ ಆಗಲಿದ್ದಾರೆ.