ಮುಂಬೈ (Mumbai): ಪ್ರವಾದಿ ವಿರುದ್ಧ ಹೇಳಿಕೆ ನೀಡಿದ್ದ ನೂಪುರ್ ಶರ್ಮಾರನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದ ಮಹಾರಾಷ್ಟ್ರದ ಕೆಮಿಸ್ಟ್ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಅಮರಾವತಿ ನಗರ ಅಪರಾಧ ವಿಭಾಗದ ಪೊಲೀಸರು ಸ್ಥಳೀಯ ನಿವಾಸಿ ಇರ್ಫಾನ್ ಖಾನ್ (32) ನನ್ನು ನಾಗ್ಪುರದಲ್ಲಿ ಸಂಜೆ ಬಂಧಿಸಿದ್ದು, ಅಮರಾವತಿಯಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ (54) ಅವರನ್ನು ಕೊಲೆ ಮಾಡಲು ಈತ ಸಂಚು ರೂಪಿಸಿದ್ದ ಎಂದು ನಗರ ಪೊಲೀಸ್ ಆಯುಕ್ತ ಡಾ.ಆರತಿ ಸಿಂಗ್ ಹೇಳಿದ್ದಾರೆ.
ಪ್ರಕರಣದಲ್ಲಿ ಇದು 7ನೇ ಬಂಧನವಾಗಿದೆ. ಅಮರಾವತಿಯ ಶ್ಯಾಮ್ ಚೌಕ್ ಪ್ರದೇಶದ ಘಂಟಾಘರ್ ಬಳಿ ಜೂನ್ 21 ರಂದು ರಾತ್ರಿ 10.30 ರ ಸುಮಾರಿಗೆ ಕೊಲ್ಹೆ ಅವರನ್ನು ಇರಿದು ಹತ್ಯೆ ಮಾಡಲಾಗಿತ್ತು. ಪ್ರವಾದಿ ಮಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ, ಕೊಲ್ಹೆ ವಾಟ್ಸಾಪ್ ಗ್ರೂಪ್‌ಗಳಲ್ಲಿ ಪೋಸ್ಟ್ ಶೇರ್ ಮಾಡಿದ್ದರು. ಇದಕ್ಕಾಗಿ ಕೊಲೆ ನಡೆದಿರಬಹುದು ಎಂದು ಉಪ ಪೊಲೀಸ್ ಆಯುಕ್ತ ವಿಕ್ರಮ್ ಸಾಲಿ ಸುದ್ದಿಗಾರರಿಗೆ ತಿಳಿಸಿದರು.
ಹತ್ಯೆಗೂ ಮೂರು ದಿನಗಳ ಮೊದಲು ಆರೋಪಿಗಳು ಕೊಲ್ಹೆಯವರ ಚಲನವಲನಗಳನ್ನು ಗಮನಿಸಿದ್ದರು ಎಂದು ಸಾಲಿ ಹೇಳಿದ್ದಾರೆ.
ಇದಕ್ಕೂ ಮುನ್ನ ಪೊಲೀಸರು ಮುದಸ್ಸರ್ ಅಹಮದ್ ಅಲಿಯಾಸ್ ಸೋನು ರಜಾ ಶೇಖ್ ಇಬ್ರಾಹಿಂ (22), ಶಾರುಖ್ ಪಠಾಣ್ ಅಲಿಯಾಸ್ ಬಾದಶಾ ಹಿದಾಯತ್ ಖಾನ್ (25), ಅಬ್ದುಲ್ ತೌಫಿಕ್ ಅಲಿಯಾಸ್ ನಾನು ಶೇಖ್ ತಸ್ಲೀಂ (24), ಶೋಬ್ ಖಾನ್ ಅಲಿಯಾಸ್ ಭೂರ್ಯ ಸಬೀರ್ ಖಾನ್ (22), ಅತೀಬ್ ರಶೀದ್ ಆದಿಲ್ ರಶೀದ್ (22) ಮತ್ತು ಯೂಸುಫ್ ಖಾನ್ ಬಹದ್ದೂರ್ ಖಾನ್ (44) ಎಂಬುವವರನ್ನು ಬಂಧಿಸಿದ್ದರು.