ಮನೆ ಸುದ್ದಿ ಜಾಲ ಕೇಂದ್ರದಿಂದ ತುರ್ತು ಅಧಿಕಾರ ಬಳಕೆ; ಎಲ್‍ಪಿಜಿ ಉತ್ಪಾದನೆ ಹೆಚ್ಚಿಸಲು ಸಂಸ್ಕರಣಾ ಘಟಕಗಳಿಗೆ ಆದೇಶ..!

ಕೇಂದ್ರದಿಂದ ತುರ್ತು ಅಧಿಕಾರ ಬಳಕೆ; ಎಲ್‍ಪಿಜಿ ಉತ್ಪಾದನೆ ಹೆಚ್ಚಿಸಲು ಸಂಸ್ಕರಣಾ ಘಟಕಗಳಿಗೆ ಆದೇಶ..!

0

ನವದೆಹಲಿ : ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿರುವ ಹಿನ್ನೆಲೆಯಲ್ಲಿ ಅಡುಗೆ ಇಂಧನದ ಕೊರತೆಯನ್ನು ತಡೆಗಟ್ಟಲು ಎಲ್‍ಪಿಜಿ ಉತ್ಪಾದನೆಯನ್ನು ಗರಿಷ್ಠಗೊಳಿಸುವಂತೆ ಸಂಸ್ಕರಣಾ ಘಟಕಗಳಿಗೆ ತುರ್ತು ಅಧಿಕಾರ ಬಳಸಿ ಕೇಂದ್ರ ಸರ್ಕಾರ ಆದೇಶಿಸಿದೆ.

ಮನೆಗಳಿಗೆ ವಿತರಿಸುವ ಎಲ್‍ಪಿಜಿಗಾಗಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್‍ಗಳಿಗೆ ಪ್ರೋಪೇನ್ ಮತ್ತು ಬ್ಯುಟೇನ್ ಲಭ್ಯವಾಗುವಂತೆ ನೋಡಿಕೊಳ್ಳಲು ಉತ್ಪಾದಕರಿಗೆ ಸೂಚಿಸಿದೆ.

ವಿಶ್ವದ 2ನೇ ಅತಿ ದೊಡ್ಡ ಎಲ್‍ಪಿಜಿ ಆಮದು ದೇಶವಾಗಿರುವ ಭಾರತವು ಕಳೆದ ವರ್ಷ 33.15 ಮಿಲಿಯನ್ ಮೆಟ್ರಿಕ್‌ ಟನ್ ಅಡುಗೆ ಅನಿಲವನ್ನು ಬಳಸಿದೆ. ದೇಶದಲ್ಲಿ ಬಳಕೆಯಾಗುತ್ತಿರುವ ಎಲ್‍ಪಿಜಿಯಲ್ಲಿ ಆಮದುಗಳು ಸುಮಾರು ಮೂರನೇ ಎರಡರಷ್ಟು ಪಾಲು ಹೊಂದಿದೆ. ಈ ಪೈಕಿ ಸುಮಾರು ಶೇ.85-90ರಷ್ಟನ್ನು ಮಧ್ಯಪ್ರಾಚ್ಯವು ಪೂರೈಸುತ್ತದೆ.

ಸರ್ಕಾರಿ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಸುಮಾರು 33.20 ಕೋಟಿ ಸಕ್ರಿಯ ಎಲ್‍ಪಿಜಿ ಗ್ರಾಹಕರಿದ್ದಾರೆ. ಎಲ್‍ಪಿಜಿ ಉತ್ಪಾದನೆಗಾಗಿ ಕಡ್ಡಾಯವಾಗಿ ಪ್ರೋಪೇನ್ ಮತ್ತು ಬ್ಯುಟೇನ್ ಬಳಕೆಯಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್‍ನಿಂದ ಗ್ಯಾಸೋಲಿನ್ ಮಿಶ್ರಣ ಘಟಕದಲ್ಲಿ ಉತ್ಪಾದನೆಯನ್ನು ಮೊಟಕುಗೊಳಿಸಿತ್ತು. ಈ ರೀತಿ ಕೊರತೆ ಉಂಟಾಗುವುದನ್ನು ತಡೆಯಲು ಪೆಟ್ರೋಕೆಮಿಕಲ್‍ಗಳ ಉತ್ಪಾದನೆಗೆ ಪ್ರೋಪೇನ್ ಮತ್ತು ಬ್ಯುಟೇನ್ ಪೂರೈಸದಂತೆಯೂ ಸರ್ಕಾರ ಸಂಸ್ಕರಣಾಗಾರಗಳಿಗೆ ಆದೇಶಿಸಿದೆ.