ಮೈಸೂರು : ಅಧಿಕಾರ ಬಲಾಢ್ಯರ ಕೈಯಲ್ಲಿ ಇರಬಾರದು. ಅಧಿಕಾರ ಎಲ್ಲರನ್ನು ಪ್ರೀತಿಸುವವರು, ಎಲ್ಲಾರನ್ನು ಸಮಾನವಾಗಿ ಕಾಣುವವರ ಕೈಯಲ್ಲಿ ಇರಬೇಕು ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಗದ್ದಲದ ನಡುವೆಯೆ ಸಿಎಂ ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರ ವರುಣದಲ್ಲಿ ಮಾತಾಡಿರುವ ಮಾತು ಚರ್ಚೆಗೆ ಗ್ರಾಸವಾಗಿದೆ. ಅಧಿಕಾರ ಬಲಾಢ್ಯರ ಕೈಯಲ್ಲಿ ಇರಬಾರದು. ಅಧಿಕಾರ ಎಲ್ಲರನ್ನು ಪ್ರೀತಿಸುವವರು, ಎಲ್ಲರನ್ನು ಸಮಾನವಾಗಿ ಕಾಣುವವರ ಕೈಯಲ್ಲಿ ಇರಬೇಕು ಎಂದು ಹೇಳುವ ಮೂಲಕ ಚರ್ಚೆಗೆ ಕಾರಣರಾಗಿದ್ದಾರೆ.
ಇದೇ ಮೊದಲ ಬಾರಿಗೆ ದೇವರ ವಿಚಾರದಲ್ಲೂ ಸಿಎಂ ಸುದೀರ್ಘ ಭಾಷಣ ಮಾಡಿದ್ದು, ದೇವರು ದೇವಸ್ಥಾನದಲ್ಲಿ ಮಾತ್ರ ಇರಲ್ಲ. ದೇವರು ಎಲ್ಲಾ ಕಡೆ ಇದ್ದಾನೆ ಎಂಬುದನ್ನು ನಾನು ಬಲವಾಗಿ ನಂಬಿದ್ದೇನೆ ಎಂದು ಹೇಳುವ ಮೂಲಕ ದೇವರನ್ನು ತಾನು ಕೂಡ ನಂಬುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಕಷ್ಟ ಬಂದಾಗ ಮಾತ್ರ ದೇವರನ್ನು ಪ್ರಾರ್ಥಿಸಲು ಹೋಗಬೇಡಿ. ಎಲ್ಲಾ ಕಾಲದಲ್ಲೂ ದೇವರನ್ನು ಪ್ರಾರ್ಥಿಸಿ, ಪ್ರೀತಿಸಿ. ದೇವಸ್ಥಾನ ಮಾಡಿದರೆ ಮಾತ್ರ ದೇವರು ಒಲಿಯುವುದಿಲ್ಲ. ನಮ್ಮೊಳಗೆ ದೇವರು ಇದ್ದಾನೆ. ಇನ್ನೊಬ್ಬರಿಗೂ ಒಳ್ಳೆಯದಾಗಲಿ, ನಂಗೂ ಒಳ್ಳೆಯದಾಗಲಿ ಎಂದಾಗ ಮಾತ್ರ ದೇವರು ಒಲಿಯುತ್ತಾನೆ ಎಂದು ದೇವರ ಕುರಿತ ತಮ್ಮ ನಂಬಿಕೆ ಬಗ್ಗೆ ಮೊದಲ ಬಾರಿಗೆ ಮಾತಾಡಿದ್ದಾರೆ.















