ಮನೆ ಸುದ್ದಿ ಜಾಲ ಕೊಟ್ಟಿಯೂರು ದೇವಾಲಯಕ್ಕೆ ಕನ್ನಡಿಗರಿಗೆ ಆಹ್ವಾನ: ಕನ್ನಡದಲ್ಲೇ ಮಾತನಾಡಿದ ಕಣ್ಣೂರು ಡಿಐಜಿ ಯತೀಶ್ ಚಂದ್ರ

ಕೊಟ್ಟಿಯೂರು ದೇವಾಲಯಕ್ಕೆ ಕನ್ನಡಿಗರಿಗೆ ಆಹ್ವಾನ: ಕನ್ನಡದಲ್ಲೇ ಮಾತನಾಡಿದ ಕಣ್ಣೂರು ಡಿಐಜಿ ಯತೀಶ್ ಚಂದ್ರ

0

ಬೆಂಗಳೂರು, ಜೂನ್ 10: ಕೇರಳದ ಕೊಟ್ಟಿಯೂರು ದೇವಾಲಯಕ್ಕೆ ಭೇಟಿ ನೀಡಿದ್ದ ಕರ್ನಾಟಕದ ಭಕ್ತರ ಮೇಲೆ ದೌರ್ಜನ್ಯ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ನಡುವೆಯೇ, ಕಣ್ಣೂರು ವಲಯದ ಡಿಐಜಿ ಯತೀಶ್ ಚಂದ್ರ ಕನ್ನಡದಲ್ಲೇ ಮಾತನಾಡಿ ಕರ್ನಾಟಕದ ಭಕ್ತರಿಗೆ ದೇವಾಲಯಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ. ದೇವಾಲಯದಲ್ಲಿ ಅಗತ್ಯ ಭದ್ರತಾ ಹಾಗೂ ಮೂಲಸೌಕರ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಯಾರು ಐಪಿಎಸ್ ಅಧಿಕಾರಿ ಯತೀಶ್ ಚಂದ್ರ?

ಕನ್ನಡದಲ್ಲಿ ಮಾತನಾಡಿದ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಯತೀಶ್ ಚಂದ್ರ ಯಾರು ಎಂಬ ಕುರಿತು ಸಾಕಷ್ಟು ಕುತೂಹಲ ವ್ಯಕ್ತವಾಗಿದೆ. ಮೂಲತಃ ದಾವಣಗೆರೆ ಜಿಲ್ಲೆಯವರಾದ ಯತೀಶ್ ಚಂದ್ರ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಬಳಿಕ ಸಮಾಜ ಸೇವೆಯ ಉದ್ದೇಶದಿಂದ ಯುಪಿಎಸ್‌ಸಿ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾಗಿದ್ದಾರೆ.

ಈ ಹಿಂದೆ ಪ್ರಧಾನಮಂತ್ರಿಯವರ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ತಮ್ಮ ದೈಹಿಕ ಕ್ಷಮತೆಯ ಮೂಲಕ ಗಮನ ಸೆಳೆದಿದ್ದರು. 2021ರಲ್ಲಿ ಡೆಪ್ಯುಟೇಶನ್ ಆಧಾರದ ಮೇಲೆ ಕರ್ನಾಟಕಕ್ಕೆ ಆಗಮಿಸಿದ್ದ ಅವರು, ಬೆಂಗಳೂರು ನಗರದಲ್ಲಿ ಡಿಸಿಪಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ಕೇರಳಕ್ಕೆ ಮರಳಿದ ಬಳಿಕ ಮಾಹಿತಿ, ಸಂವಹನ ಮತ್ತು ತಂತ್ರಜ್ಞಾನ ವಿಭಾಗದ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಕಣ್ಣೂರು ರೇಂಜ್ ಡಿಐಜಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕನ್ನಡದಲ್ಲೇ ಭಕ್ತರಿಗೆ ಸಂದೇಶ

ಕರ್ನಾಟಕದ ಭಕ್ತರಿಗಾಗಿ ಕನ್ನಡದಲ್ಲೇ ಮಾತನಾಡಿರುವ ಯತೀಶ್ ಚಂದ್ರ ಅವರ ವಿಡಿಯೋ ಈಗ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮಾತನಾಡಿರುವ ಅವರು, ಕೊಟ್ಟಿಯೂರು ದೇವಾಲಯ ಆಡಳಿತ ಮಂಡಳಿ ಹಾಗೂ ಪಂಚಾಯತ್ ವತಿಯಿಂದ ವೈಶಾಖ ಮಹೋತ್ಸವಕ್ಕಾಗಿ ಸಮರ್ಪಕ ಸಿದ್ಧತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದ್ದು, ವಾಹನ ನಿಲುಗಡೆ ವ್ಯವಸ್ಥೆಯನ್ನೂ ಸುಧಾರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಕರ್ನಾಟಕದಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ದೇವಾಲಯ ಆವರಣದಲ್ಲಿ ಕನ್ನಡ ಭಾಷೆಯಲ್ಲೇ ನಾಮಫಲಕಗಳನ್ನು ಅಳವಡಿಸಲಾಗಿದ್ದು, ಧ್ವನಿವರ್ಧಕಗಳ ಮೂಲಕವೂ ಕನ್ನಡದಲ್ಲಿ ಪ್ರಕಟಣೆಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಇದರ ಜೊತೆಗೆ, ಪವಿತ್ರ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಪರಿಸರ ಸಂರಕ್ಷಣೆಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಪ್ಲಾಸ್ಟಿಕ್, ಬಟ್ಟೆ ಹಾಗೂ ಇತರ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಕೋರಿದ್ದಾರೆ.

ಭಕ್ತರು ಸರದಿ ಸಾಲಿನಲ್ಲಿ ಶಾಂತಿಯುತವಾಗಿ ದೇವರ ದರ್ಶನ ಪಡೆಯಬಹುದು. ಭದ್ರತೆಗಾಗಿ ಪೊಲೀಸರು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ 26 ದಿನಗಳ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಯತೀಶ್ ಚಂದ್ರ ಮನವಿ ಮಾಡಿದ್ದಾರೆ.