ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಆಯೋಜಿಸಿದ್ದ, ಔತಣಕೂಟದಲ್ಲಿ ಸಿಎಂ ಸಿದ್ದರಾಮಯ್ಯ ಮಂತ್ರಿಗಳಾದ ಎಸ್ಎಸ್ ಮಲ್ಲಿಕಾರ್ಜುನ್ ಮತ್ತು ಜಮೀರ್ ಅಹಮದ್ ಮಧ್ಯೆ ರಾಜಿ ಸಂಧಾನ ಮಾಡಿದ್ದಾರೆ.
ಸಿದ್ದರಾಮಯ್ಯನವರು ಅಕ್ಕಪಕ್ಕ ಕೂರಿಸಿಕೊಂಡು ಇಬ್ಬರು ನಾಯಕರನ್ನು ಕೂರಿಸಿಕೊಂಡು ಮಾತನಾಡಿಸಿದ್ದಾರೆ. ಬಹಿರಂಗವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಹಂಚಿಕೆ ಬಗ್ಗೆ ಮಾತನಾಡದಂತೆ ಇಬ್ಬರಿಗೆ ಸಿಎಂ ಸೂಚಿಸಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಅಲ್ಪಸಂಖ್ಯಾತರಿಗೆ ನೀಡಬೇಕೆಂದು ಜಮೀರ್ ಹೇಳಿದ್ದರು. ಇದಕ್ಕೆ ಸಿಟ್ಟಾದ ಎಸ್ಎಸ್ ಮಲ್ಲಿಕಾರ್ಜುನ್ ಅವರು, ನಮ್ಮ ಕ್ಷೇತ್ರದಲ್ಲಿ ಬಂದು ಮಾತನಾಡಲು ಅವನ್ಯಾರು ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದರು. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಪಕ್ಷದ ಶಾಸಕರಿಗೆ ಭೋಜನಕೂಟ ಆಯೋಜಿಸಿದ್ದರು.
ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು ಹಾಗೂ ಶಾಸಕರು ಇಂದಿನ ಭೋಜನ ಕೂಟದಲ್ಲಿ ಭಾಗಿಯಾಗಿದ್ದರು. ಇತ್ತೀಚೆಗಷ್ಟೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟು ಕೊಡೋ ಬಗ್ಗೆ ಡಿಕೆಶಿ ಸುಳಿವು ಕೊಟ್ಟಿದ್ದರು. ಬಿಜೆಪಿ ಶಾಸಕರಾದ ಎಸ್ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಡಿನ್ನರ್ ಪಾರ್ಟಿಗೆ ಹಾಜರಾಗಿದ್ದರು.














