ಮನೆ ರಾಷ್ಟ್ರೀಯ 13 ವರ್ಷಗಳಿಂದ ಕೋಮಾದಲ್ಲಿದ್ದ ವ್ಯಕ್ತಿಗೆ ದಯಾಮರಣ – ಸುಪ್ರೀಂ ಐತಿಹಾಸಿಕ ತೀರ್ಪು

13 ವರ್ಷಗಳಿಂದ ಕೋಮಾದಲ್ಲಿದ್ದ ವ್ಯಕ್ತಿಗೆ ದಯಾಮರಣ – ಸುಪ್ರೀಂ ಐತಿಹಾಸಿಕ ತೀರ್ಪು

0

ನವದೆಹಲಿ : 13 ವರ್ಷಗಳಿಂದ ಕೋಮಾದಲ್ಲಿದ್ದ 31 ವರ್ಷದ ವ್ಯಕ್ತಿಗೆ ದಯಾಮರಣ ನೀಡಲು ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡುವ ಮೂಲಕ ಐತಿಹಾಸಿಕ ತೀರ್ಪು ನೀಡಿದೆ. ರೋಗಿಯ ಆರೋಗ್ಯ ಸ್ಥಿತಿಯ ಕುರಿತು ಎರಡು ವೈದ್ಯಕೀಯ ಮಂಡಳಿಗಳ ಅಭಿಪ್ರಾಯಗಳನ್ನು ಪರಿಗಣಿಸಿ ತೀರ್ಪು ಪ್ರಕಟಿಸಿದೆ. ನ್ಯಾಯಾಲಯವು ತನ್ನ ಮಾರ್ಗಸೂಚಿಗಳ ಅಡಿಯಲ್ಲಿ ನಿಷ್ಕ್ರಿಯ ದಯಾಮರಣವನ್ನು ಅನುಮತಿಸಿದ ಮೊದಲ ಪ್ರಕರಣ ಇದಾಗಿದೆ.

ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹರೀಶ್ ರಾಣಾ 2013 ರಲ್ಲಿ ಪೇಯಿಂಗ್ ಗೆಸ್ಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಹರೀಶ್‌ ರಾಣಾ ಪೋಷಕರು ಮಗನಿಗೆ ದಯಾಮರಣ ನೀಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಮನವಿ ಮಾಡಿಕೊಂಡಿದ್ದರು. ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರ ಪೀಠವು ತನ್ನ ಆದೇಶದಲ್ಲಿ ದಯಾಮರಣ ಕುರಿತು ಕಾನೂನು ತರುವಂತೆ ಕೇಂದ್ರವನ್ನು ಒತ್ತಾಯಿಸಿದೆ.

ಪ್ರಾಥಮಿಕ ಮತ್ತು ಮಾಧ್ಯಮಿಕ ವೈದ್ಯಕೀಯ ಮಂಡಳಿಗಳು ರೋಗಿಯ ಜೀವ ಬೆಂಬಲವನ್ನು ಹಿಂತೆಗೆದುಕೊಳ್ಳುವುದನ್ನು ಪ್ರಮಾಣೀಕರಿಸಿದ ನಂತರ ನ್ಯಾಯಾಂಗ ಹಸ್ತಕ್ಷೇಪ ಸಾಮಾನ್ಯವಾಗಿ ಅಗತ್ಯವಿರುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಚಿಕಿತ್ಸೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ವೈದ್ಯಕೀಯ ಮಂಡಳಿಗಳಿಂದ ಸೂಚನೆಯನ್ನು ಪಡೆಯುವಂತೆ ಕೋರ್ಟ್‌ ಹೈಕೋರ್ಟ್‌ಗೆ ಸೂಚಿಸಿದೆ.

ಹರೀಶ್‌ ರಾಣಾಗೆ ಏನಾಗಿತ್ತು? – ಚಂಡೀಗಢದಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದ ಹರೀಶ್ ರಾಣಾ ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಲೆಗೆ ಪೆಟ್ಟು ಬಿದ್ದ ಬಳಿಕ ಕೋಮಾಗೆ ಜಾರಿದ್ದರು. ಪಿಜಿಐ ಚಂಡೀಗಢ, ದೆಹಲಿಯ ಏಮ್ಸ್, ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ, ಲೋಕ ನಾಯಕ್ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆ ಮತ್ತು ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಚೇತರಿಕೆ ಕಂಡು ಬರಲಿಲ್ಲ. ದೀರ್ಘಕಾಲದ ವೈದ್ಯಕೀಯ ಚಿಕಿತ್ಸೆ ಮನೆಯರಿಗೂ ಹೊರೆಯಾಗಿತ್ತು. ಹೀಗಾಗಿ ಕುಟುಂಬವು ದಯಾಮರಣ ಕೋರಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿತ್ತು.

ಹರೀಶ್ ರಾಣಾ ನರಕಯಾತನೆಯ ಹಾದಿ – 20 ಆಗಸ್ಟ್ 2013 – ಚಂಡೀಗಢ ವಿವಿ ವಿದ್ಯಾರ್ಥಿ ಹರೀಶ್ ರಾಣಾ ಪಿಜಿಯ 4ನೇ ಮಹಡಿಯಿಂದ ಬಿದ್ದು ತಲೆಗೆ ಗಾಯ, ಬ್ರೈನ್ ಇಂಜುರಿ
– ಜುಲೈ 2024 – ದಯಾಮರಣ ಕೋರಿ ಪೋಷಕರಿಂದ ದೆಹಲಿ ಹೈಕೋರ್ಟ್ ಗೆ ಅರ್ಜಿ
– ನವೆಂಬರ್ 2024 – ಸುಪ್ರೀಂ ಕೋರ್ಟ್ ನಿಂದ ಅನುಮತಿಗೆ ನಕಾರ – ಚಿಕಿತ್ಸೆಗೆ ಸಹಾಯ ಸಾಧ್ಯತೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸೂಚನೆ
– ಡಿಸೆಂಬರ್ 2025 – ಮತ್ತೆ ಸುಪ್ರೀಂ ಕೋರ್ಟ್ ಗೆ ಪೋಷಕರ ಅರ್ಜಿ – ಪರಿಸ್ಥಿತಿ ಮತ್ತಷ್ಟು ಬಿಗಾಡಾಯಿಸಿದೆ ಎಂದು ಉಲ್ಲೇಖ
– 13 ಜನವರಿ 2026 – ವಿಚಾರಣೆ ವೇಳೆ ಹರೀಶ್ ರಾಣಾ ಪೋಷಕರ ಭೇಟಿಯಾದ ಸುಪ್ರೀಂಕೋರ್ಟ್ ಜಡ್ಜ್ ಗಳು
– 15 ಜನವರಿ 2026 – ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
– 11 ಮಾರ್ಚ್ 2026 – ದಯಾಮರಣಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ತೀರ್ಪು