ಬೆಂಗಳೂರು : ಇರಾನ್ ಯುದ್ಧದ ಬಿಸಿ ಬನಶಂಕರಿ ಅಮ್ಮನವರ ಪ್ರಸಾದಕ್ಕೂ ತಟ್ಟಿದೆ. ಯುದ್ಧದ ಹಿನ್ನಲೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಸಿಗದ ಕಾರಣ ಬನಶಂಕರಿ ದೇವಸ್ಥಾನದಲ್ಲಿ ಪ್ರಸಾದ ಮಾಡಲು ಗ್ಯಾಸ್ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿದಿನ 3 ಸಾವಿರದಿಂದ 4 ಸಾವಿರ ಜನರಿಗೆ ಪ್ರಸಾದ ವಿತರಣೆ ಮಾಡಿದರೆ ಶುಕ್ರವಾರ ಹಾಗೂ ಮಂಗಳವಾರ 4 ರಿಂದ 5 ಸಾವಿರ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಬೆಳಗ್ಗೆ ಭಕ್ತಾದಿಗಳಿಗೆ ಪೊಂಗಲ್, ಪುಳಿಯೊಗರೆ, ರೈಸ್ ಬಾತ್‌ಗಳನ್ನು ಪ್ರಸಾದವಾಗಿ ನೀಡಿದರೆ ಮಧ್ಯಾಹ್ನ ಅನ್ನ ಸಾಂಬರ್ ನೀಡಲಾಗುತ್ತದೆ. ಸಂಜೆ ಸಹ ಪ್ರಸಾದದ ವ್ಯವಸ್ಥೆ ಇದೆ.
ಪ್ರತಿದಿನ ಭಕ್ತಾದಿಗಳಿಗೆ ಪ್ರಸಾದ ಸಿದ್ಧತೆ ಮಾಡೋದಕ್ಕೆ ಒಂದರಿಂದ ಎರಡು ಕಮರ್ಷಿಯಲ್ ಗ್ಯಾಸ್ ಬೇಕಾಗುತ್ತದೆ. ನಮ್ಮ ಬಳಿ ಸದ್ಯ 4 ಗ್ಯಾಸ್ ಬಾಕಿ ಇದ್ದು, ಇಂದು ಹಾಗೂ ನಾಳೆ ಸಂಜೆಯರೆಗೂ ನಿರ್ವಹಣೆ ಮಾಡಬಹುದು. ಸಿಲಿಂಡರ್ ಸಿಗದೇ ಇದ್ದರೆ ಶುಕ್ರವಾರದಿಂದ ಭಕ್ತಾಧಿಗಳಿಗೆ ಪ್ರಸಾದ ನೀಡುವುದನ್ನು ನಿಲ್ಲಿಸಬೇಕಾಗುತ್ತದೆ ಎಂದು ದೇವಸ್ಥಾನ ತಿಳಿಸಿದೆ.















