ಮನೆ ಸುದ್ದಿ ಜಾಲ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕರ ಗಲಾಟೆ; ಕೈಕೈ ಮಿಲಾಯಿಸುವ ಹಂತಕ್ಕೆ ಜಗಳ

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕರ ಗಲಾಟೆ; ಕೈಕೈ ಮಿಲಾಯಿಸುವ ಹಂತಕ್ಕೆ ಜಗಳ

0

ಬೆಂಗಳೂರು : ನಗರದ ಖಾಸಗಿ ಹೋಟೆಲ್‌ನಲ್ಲಿ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕರು ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ. ಕೈಕೈ ಮಿಲಾಯಿಸುವ ಹಂತಕ್ಕೆ ಜಗಳ ಹೋದ ಘಟನೆ ನಡೆದಿದೆ. ಶಾಸಕ ನಾರಾಯಣಸ್ವಾಮಿ ಮತ್ತು ರಾಜೇಗೌಡ ನಡುವೆ ವಾಕ್ಸಮರ ನಡೆದಿದೆ.

ಸಿಎಲ್‌ಪಿ ಸಭೆಯಲ್ಲಿ ಬಂಗಾರ ಪೇಟೆ ಶಾಸಕ ನಾರಾಯಣಸ್ವಾಮಿ ಹಾಗೂ ಶೃಂಗೇರಿ ಶಾಸಕ ರಾಜೇಗೌಡ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪದಲ್ಲಿ ಶಾಸಕಾಂಗ ಪಕ್ಷದ ಸಭೆಯಿಂದಲೇ ಶಾಸಕ ನಾರಾಯಣಸ್ವಾಮಿ ಹೊರನಡೆದರು. ‘ಕಂದಾಯ ಇಲಾಖೆಯ ಹಿರಿಯ ಅಧಿಕಾರಿ ನನಗೆ ಉದ್ದೇಶ ಪೂರ್ವಕವಾಗಿ ಟಾರ್ಚರ್ ಮಾಡುತ್ತಿದ್ದಾರೆ.

30-40 ನೋಟಿಸ್ ನೀಡಿದ್ದಾರೆ. ಅಧಿಕಾರಿಯೇ ಪವರ್‌ಫುಲ್’ ಎಂದು ನಾರಾಯಣಸ್ವಾಮಿ ಕಿಡಿಕಾರಿದರು. ಶಾಸಕಾಂಗ ಪಕ್ಷದ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಆಗ ಆ ಅಧಿಕಾರಿ ಒಳ್ಳೆಯವರು ಎಂದ ಶೃಂಗೇರಿ ಶಾಸಕ ರಾಜೇಗೌಡ ಪ್ರತಿಕ್ರಿಯಿಸಿದರು. ಇದಕ್ಕೆ ಕೋಪಗೊಂಡ ನಾರಾಯಣಸ್ವಾಮಿ, ‘ನೋಟಿಸ್ ಕೊಟ್ಟಿದ್ದು ನನಗೆ. ನಿಮ್ಮನ್ನು ಯಾರು ಕೇಳಿದ್ದು? ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಿ’ ಎಂದು ರಾಜೇಗೌಡ ವಿರುದ್ಧ ಗರಂ ಆದರು. ಸಿಟ್ಟಿನಿಂದ ಶಾಸಕಾಂಗ ಪಕ್ಷದ ಸಭೆಯಿಂದಲೇ ಹೊರನಡೆದರು.