ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಿಳಿನೆಲೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಸುಬ್ರಹ್ಮಣ್ಯ ರೈಲು ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ತಿಂಗಳುಗಳಿಂದ ರಾಶಿ ರಾಶಿ ಕಸ ಸಂಗ್ರಹವಾಗಿದ್ದು, ಪರಿಸರ ಮಾಲಿನ್ಯ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ರಾಜ್ಯದ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣವಾದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ರೈಲುಗಳ ಮೂಲಕ ಆಗಮಿಸುತ್ತಾರೆ. ಆದರೆ ರೈಲು ನಿಲ್ದಾಣದ ಆವರಣ ಹಾಗೂ ಅದರ ಸುತ್ತಮುತ್ತ ಕಸದ ರಾಶಿಗಳು ಹೆಚ್ಚಾಗಿರುವುದು ಪ್ರಯಾಣಿಕರು ಹಾಗೂ ಸ್ಥಳೀಯರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಸ್ಥಳೀಯ ನಿವಾಸಿಗಳ ಪ್ರಕಾರ, ರೈಲು ನಿಲ್ದಾಣದ ಕೆಲವು ಭಾಗಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಆಹಾರದ ಅವಶೇಷಗಳು, ಬಾಟಲಿಗಳು ಹಾಗೂ ಇತರೆ ತ್ಯಾಜ್ಯಗಳು ತಿಂಗಳುಗಳಿಂದ ತೆರವುಗೊಳ್ಳದೇ ಬಿದ್ದಿವೆ ಎನ್ನಲಾಗುತ್ತಿದೆ.

ಹಾಗೂ ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ಕಸದಿಂದ ದುರ್ವಾಸನೆ ಹರಡುತ್ತಿದ್ದು, ಸೊಳ್ಳೆಗಳು ಹಾಗೂ ಇತರ ಕೀಟಗಳ ಉತ್ಪತ್ತಿಗೆ ಕಾರಣವಾಗುತ್ತಿದೆ ಎಂದು ದೂರಲಾಗಿದೆ. ಈ ಕುರಿತು ಗ್ರಾಮಸ್ಥರು ಬಿಳಿನೆಲೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ), ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ(ಇಒ) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಅವರಿಗೆ ಲಿಖಿತ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಹಲವು ಬಾರಿ ಗಮನಕ್ಕೆ ತಂದಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ರೈಲು ನಿಲ್ದಾಣವು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ಭಕ್ತರ ಮೊದಲ ಸಂಪರ್ಕ ಕೇಂದ್ರವಾಗಿದ್ದು, ಇಲ್ಲಿ ಸ್ವಚ್ಛತೆ ಕಾಪಾಡುವುದು ಅತ್ಯಗತ್ಯ. ಆದರೆ ಕಸದ ರಾಶಿಗಳು ನಿಲ್ದಾಣದ ಸೌಂದರ್ಯವನ್ನು ಹಾಳು ಮಾಡುವುದರ ಜೊತೆಗೆ ಪ್ರವಾಸಿಗರಲ್ಲಿ ಹಾಗೂ ಭಕ್ತರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮತ್ತು ಕೆಲವು ಸಂದರ್ಭಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿದ್ದರೂ ಸಂಪೂರ್ಣವಾಗಿ ಕಸ ತೆರವುಗೊಳಿಸಿ ಸ್ಥಳವನ್ನು ಶುಚಿಗೊಳಿಸುವ ಕ್ರಮ ಕೈಗೊಳ್ಳಲಾಗಿಲ್ಲ ಎನ್ನಲಾಗಿದೆ. ಇದರಿಂದ ಸಮಸ್ಯೆ ಪುನರಾವರ್ತನೆಯಾಗುತ್ತಿದ್ದು, ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಸಮನ್ವಯದೊಂದಿಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸ್ಥಳೀಯರು ರೈಲ್ವೆ ಇಲಾಖೆ, ಗ್ರಾಮ ಪಂಚಾಯತ್ ಹಾಗೂ ಜಿಲ್ಲಾ ಆಡಳಿತವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣ ಸ್ವಚ್ಛಗೊಳಿಸಬೇಕು, ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಹಾಗೂ ನಿಯಮಿತ ಸ್ವಚ್ಛತಾ ಕಾರ್ಯಗಳನ್ನು ನಡೆಸಬೇಕು ಎಂದು ಆಗ್ರಹಿಸಿದ್ದಾರೆ ಎಂಬುದ್ದಾಗಿದೆ.
















