ಮನೆ ರಾಷ್ಟ್ರೀಯ ‌ವಿಶ್ವಾಸ ಮತಯಾಚನೆಯಲ್ಲಿ ಗೆದ್ದ ಏಕನಾಥ ಶಿಂಧೆ

‌ವಿಶ್ವಾಸ ಮತಯಾಚನೆಯಲ್ಲಿ ಗೆದ್ದ ಏಕನಾಥ ಶಿಂಧೆ

0

ಮುಂಬೈ(Mumbai): ವಿಶ್ವಾಸಮತ ಪರೀಕ್ಷೆಯಲ್ಲಿ ಸಿಎಂ ಏಕನಾಥ್​ ಶಿಂದೆ 162 ಮತಗಳನ್ನು ಪಡೆಯುವ ಮೂಲಕ ಬಹುಮತ ಸಾಬೀತು ಮಾಡಿದ್ದು, ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಅಧಿವೇಶನದ ಆರಂಭಗೊಂಡ ಬಳಿಕ ಬಿಜೆಪಿಯ ಸುಧೀರ್ ಮುಂಗಂಟಿವಾರ್ ಮತ್ತು ಶಿವಸೇನೆಯ ಭರತ್ ಗೊಗವಾಲೆ ಅವರು ವಿಶ್ವಾಸ ಮತವನ್ನು ಮಂಡಿಸಿದರು. ಬಳಿಕ ಸಭಾಪತಿ ರಾಹುಲ್​ ನಾರ್ವೇಕರ್​ ಸರ್ವಸದಸ್ಯರ ಅನುಮತಿಯ ಮೇರೆಗೆ ಸದನವನ್ನು ಧ್ವನಿಮತಕ್ಕೆ ಹಾಕಿದರು.

ಈ ವೇಳೆ ನಡೆದ ಪ್ರಕ್ರಿಯೆಯಲ್ಲಿ ಸಿಎಂ ಏಕನಾಥ್ ಶಿಂದೆ 162 ಮತಗಳನ್ನು ಪಡೆದು ಬಹುಮತ ಸಾಬೀತು ಮಾಡಿದರು. ಅವರ ವಿರುದ್ಧ 99 ಮತಗಳು ಚಲಾವಣೆಯಾದವು. 3 ಸದಸ್ಯರು ವಿಧಾನಸಭೆ ಅಧಿವೇಶನಕ್ಕೆ ಗೈರಾಗಿದ್ದರು. 23 ನಿಮಿಷಗಳಲ್ಲಿ ಸರ್ಕಾರ ಬಹುಮತ ಪಡೆಯಿತು.

ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಮಹಾವಿಕಾಸ ಆಘಾಡಿ ಸರ್ಕಾರದ ವಿರುದ್ಧ ಬಂಡೆದ್ದು, ಬಿಜೆಪಿಯೊಂದಿಗೆ ಸೇರಿ ಶಿಂಧೆ ಅವರು ಮುಖ್ಯಮಂತ್ರಿಯಾಗಿದ್ದರು. ಬಿಜೆಪಿಯ ದೇವೇಂದ್ರ ಫಡಣವೀಸ್ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ.

ಉದ್ಧವ್‌ ಠಾಕ್ರೆಯೊಂದಿಗೆ ಗುರುತಿಸಿಕೊಂಡಿದ್ದ ಮತ್ತೊಬ್ಬ ಶಾಸಕ, ಸಂತೋಶ್‌ ಬಂಗಾರ್‌ ಎಂಬುವವರೂ ಕೂಡ ಇಂದು ಶಿಂಧೆ ಬಣಕ್ಕೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಶಿಂಧೆ ಕಡೆಯ ಶಾಸಕರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಇದಕ್ಕೂ ಹಿಂದೆ ಶಿಂಧೆ – ಬಿಜೆಪಿ ದೋಸ್ತಿ ತಮ್ಮ ಕಡೆಯ ರಾಹುಲ್‌ ನರ್ವೇಕರ್‌ (ಬಿಜೆಪಿ) ಅವರನ್ನು ಸ್ಪೀಕರ್‌ ಆಗಿ ಆಯ್ಕೆ ಮಾಡಿಕೊಳ್ಳುವಲ್ಲಿ ಸಫಲವಾಗಿತ್ತು.