ಮನೆ ರಾಜ್ಯ ಫೇಸ್‌ಬುಕ್‌ ಮೂಲಕ ಕಾರು ಖರೀದಿಸುವ ಮುನ್ನ ಹುಷಾರ್ – ಅಂತಾರಾಜ್ಯ ಜಾಲ ಪತ್ತೆ..!

ಫೇಸ್‌ಬುಕ್‌ ಮೂಲಕ ಕಾರು ಖರೀದಿಸುವ ಮುನ್ನ ಹುಷಾರ್ – ಅಂತಾರಾಜ್ಯ ಜಾಲ ಪತ್ತೆ..!

0

ಮೈಸೂರು : ಫೇಸ್‌ಬುಕ್‌ನಲ್ಲಿ ಐಷಾರಾಮಿ ಕಾರುಗಳ ಫೋಟೋ ನೋಡಿ ಮರುಳಾಗಬೇಡಿ. ಏಕೆಂದರೆ ಸೆಕೆಂಡ್ ಹ್ಯಾಂಡ್ ಕಾರು ಕೊಡಿಸುತ್ತೇವೆ ಅಂತ ನಂಬಿಸಿ ಕೋಟ್ಯಂತರ ರೂ ವಂಚಿಸುತ್ತಿದ್ದ, ದೊಡ್ಡ ಜಾಲವನ್ನು ಮೈಸೂರು ಪೊಲೀಸರು ಭೇದಿಸಿದ್ದಾರೆ. ಅಸಲಿ ಮಾಲೀಕರಿಗೂ ಇಲ್ಲ, ಇತ್ತ ಖರೀದಿ ಮಾಡುವವರಿಗೂ ಇಲ್ಲ ಎನ್ನುವ ರೀತಿ ವಂಚಿಸುತ್ತಿದ್ದರು. ಈ ಖದೀಮರ ಮೋಸದ ಆಟ ಹೇಗಿತ್ತು ಅಂತಾ ಕೇಳಿದರೆ ಶಾಕ್​ ಆಗುವುದು ಗ್ಯಾರಂಟಿ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈಗ ಹೈಟೆಕ್ ವಂಚಕರದ್ದೇ ಸದ್ದು. ಫೇಸ್‌ಬುಕ್ ಎಂಬ ಮಾಯಾಲೋಕವನ್ನೇ ಬಂಡವಾಳ ಮಾಡಿಕೊಂಡಿದ್ದ ಖದೀಮರು, ಐಷಾರಾಮಿ ಕಾರುಗಳ ಖರೀದಿ ಮತ್ತು ಮಾರಾಟದ ಹೆಸರಿನಲ್ಲಿ ಭಾರೀ ದೋಖಾ ಮಾಡುತ್ತಿದ್ದರು. ಮೈಸೂರು ಮೂಲದ ಅಭಿಷೇಕ್ ಎಂಬುವವರು ನೀಡಿದ ದೂರಿನ ಬೆನ್ನತ್ತಿದ ಮೈಸೂರು ಜಿಲ್ಲಾ ಪೊಲೀಸರು, ಈಗ ಅಂತಾರಾಜ್ಯ ವಂಚಕರ ಜಾಲವನ್ನೇ ಬಯಲಿಗೆಳೆದಿದ್ದಾರೆ.

ಈ ಪ್ರಕರಣದ ಪ್ರಮುಖ ಆರೋಪಿಗಳಾದ ರುಮಾನ್ ಷರೀಫ್, ​ಮುಜಾಹಿದ್ ಫಾಷಾ, ​ಷಾಹಬುದ್ದಿನ್‌ರನ್ನು ಬಂಧಿಸಲಾಗಿದೆ. ಈ ಮೂವರು ಆರೋಪಿಗಳನ್ನ ಬಂಧಿಸಿರುವ ಪೊಲೀಸರು, ಇವರಿಂದ ಬರೋಬ್ಬರಿ ಒಂದು ಕೋಟಿ, ಹತ್ತು ಲಕ್ಷ ರೂ ಮೌಲ್ಯದ 8 ಐಶಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಗ್ಯಾಂಗ್ ಬಳಸುತ್ತಿದ್ದ ಐಡಿಯಾ ಕೇಳಿದರೆ ನೀವು ಶಾಕ್ ಆಗುತ್ತೀರಾ.

​ಹಳೇ ಐಷಾರಾಮಿ ಕಾರುಗಳನ್ನು ಉತ್ತಮ ಬೆಲೆಗೆ ಖರೀದಿಸುವುದಾಗಿ ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡುತ್ತಿದ್ದರು. ​ನಂಬಿದ ಮಾಲೀಕರಿಗೆ ಅಲ್ಪ ಸ್ವಲ್ಪ ಮುಂಗಡ ಹಣ ನೀಡಿ ಕಾರನ್ನು ಪಡೆಯುತ್ತಿದ್ದರು. ​ಅದೇ ಕಾರನ್ನು ಮತ್ತೆ ಯಾರಿಗೋ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ​ಹೊಸ ಮಾಲೀಕರು ಕಾರಿನ ಅಸಲಿ ದಾಖಲಾತಿ ಕೇಳಿದಾಗ ರಾತ್ರೋರಾತ್ರಿ ನಾಪತ್ತೆಯಾಗುತ್ತಿದ್ದರು.

ಇತ್ತ ಕಾರಿನ ಅಸಲಿ ಮಾಲೀಕರಿಗೂ ಹಣ ಸಿಗದೆ, ಅತ್ತ ಕಾರು ಖರೀದಿಸಿದವರಿಗೂ ದಾಖಲಾತಿ ಸಿಗದೆ ಇಬ್ಬರಿಗೂ ನಾಮ ಹಾಕುತ್ತಿದ್ದರು ಈ ಖದೀಮರು. ಮೈಸೂರು ಜಿಲ್ಲಾ ಪೊಲೀಸ್, ಎಸ್​ಪಿ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆ ಮಾಡಲಾಗಿದ್ದು, ಈ ಜಾಲದ ಹಿಂದೆ ಇನ್ನೂ ಯಾರೆಲ್ಲಾ ಇದ್ದಾರೆ ಅನ್ನೋದನ್ನ ಪತ್ತೆ ಹಚ್ಚಲು ಮುಂದಾಗಿದೆ. ಸದ್ಯ ಎಂಟು ಕಾರುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಕಾರಿನ ಮೂಲ ಮಾಲೀಕರ ಪತ್ತೆಗೆ ಮುಂದಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕಾಣುವ ಆಕರ್ಷಕ ಡೀಲ್‌ಗಳ ಹಿಂದೆ ಇಂತಹ ದೊಡ್ಡ ವಂಚನೆ ಜಾಲ ಇರುತ್ತೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಇನ್ನಾದರೂ ಸಾರ್ವಜನಿಕರು ಆನ್‌ಲೈನ್ ವ್ಯವಹಾರ ಮಾಡುವಾಗ ಎಚ್ಚರದಿಂದಿರಬೇಕಿದೆ.