ಮನೆ ರಾಜ್ಯ ಜಿಬಿಎ ಅಡಿಯಲ್ಲಿನ ಐದು ಪಾಲಿಕೆಗಳ ಬಜೆಟ್ ಮಂಡನೆ..!

ಜಿಬಿಎ ಅಡಿಯಲ್ಲಿನ ಐದು ಪಾಲಿಕೆಗಳ ಬಜೆಟ್ ಮಂಡನೆ..!

0

ಬೆಂಗಳೂರು : ಬೆಂಗಳೂರು ಮಹಾಜನತೆಗೆ ಶುಕ್ರವಾರ ಹಾಗೂ ಶನಿವಾರ ಮಹತ್ವದ ದಿನ ಅಂತಾನೇ ಹೇಳಬಹುದು. ಏಕೆಂದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ 5 ನಗರ ಪಾಲಿಕೆಗಳ 2026-27ರ ಸಾಲಿನ ಆಯವ್ಯಯ ಮಂಡನೆಯಾಗಿದೆ. ಒಟ್ಟಾರೆಯಾಗಿ ಬೆಂಗಳೂರಿಗೆ 20 ಸಾವಿರ ಕೋಟಿ ರೂ ಮೀಸಲಿಡಲಾಗಿದೆ.

ಬಿಬಿಎಂಪಿ ಇತಿಹಾಸದ ಪುಟಗಳನ್ನ ಸೇರಿದ ಬಳಿಕ ಜಿಬಿಎ ಅಡಿಯಲ್ಲಿ 5 ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿವೆ. ಇದಾದ ಬಳಿಕ ಎಲ್ಲಾ ನಗರ ಪಾಲಿಕೆಗಳ ಚೊಚ್ಚಲ ಬಜೆಟ್​ಗೆ ಬೆಂಗಳೂರಿಗರು ಸಾಕ್ಷಿಯಾಗಿದ್ದಾರೆ. ಶುಕ್ರವಾರ 3,889 ಕೋಟಿ ರೂಪಾಯಿಗಳ ಪೂರ್ವ ನಗರ ಪಾಲಿಕೆ ಬಜೆಟ್ ಹಾಗೂ 3,426 ಕೋಟಿ ರೂಪಾಯಿಗಳ ಕೇಂದ್ರ ನಗರ ಪಾಲಿಕೆ ಬಜೆಟ್ ಮಂಡಿಸಲಾಗಿತ್ತು. ಇಂದು ಉಳಿದ ಉತ್ತರ, ಪಶ್ಚಿಮ ಹಾಗೂ ದಕ್ಷಿಣ ನಗರ ಪಾಲಿಕೆಗಳ ಬಜೆಟ್ ಮಂಡಿಸಲಾಗಿದೆ. 5 ಪಾಲಿಕೆಗಳ ಒಟ್ಟಾರೆ ಬಜೆಟ್ ಮೌಲ್ಯ ಬರೋಬ್ಬರಿ 20,213 ಕೋಟಿ ರೂಪಾಯಿ ಆಗಿದೆ.

ಉತ್ತರ ನಗರ ಪಾಲಿಕೆಯ ಮುಖ್ಯಾಂಶಗಳು :-
4341 ಕೋಟಿ ರೂ ಬಜೆಟ್​​ನಲ್ಲಿ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ ಶೇ.61ರಷ್ಟು ಹಣ ಮೀಸಲು.
ಘನತ್ಯಾಜ್ಯ ನಿರ್ವಹಣೆಗೆ 301 ಕೋಟಿ ರೂ ಹಣ ಮೀಸಲು.
ಪೌರ ಕಾರ್ಮಿಕರ ಕಲ್ಯಾಣಕ್ಕೆ 10 ಕೋಟಿ ರೂ.
ಕೆರೆಗಳ ವಾರ್ಷಿಕ ನಿರ್ವಹಣೆಗೆ 8 ಕೋಟಿ ರೂ.
ಅಪಾಯಕಾರಿ ಮರಗಳ ತೆರವಿಗೆ 5 ಕೋಟಿ ರೂ.
ಅರಣ್ಯ ವಿಭಾಗಕ್ಕೆ 10 ಕೋಟಿ ರೂ.
ಪಾರ್ಕ್​ಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ 62 ಕೋಟಿ ರೂ.
ಸೊಳ್ಳೆಗಳ ನಿಯಂತ್ರಣಕ್ಕೆ 8.86 ಕೋಟಿ ರೂ.
ಇಂದಿರಾ ಕ್ಯಾಂಟೀನ್​ಗಳ ನಿರ್ವಹಣೆಗೆ 11 ಕೋಟಿ ರೂ.
ಆಧುನಿಕ ಕಸಾಯಿಖಾನೆ ಸ್ಥಾಪನೆಗೆ 14 ಕೋಟಿ ರೂ.

ಪಶ್ಚಿಮ ನಗರ ಪಾಲಿಕೆಯ ಮುಖ್ಯಾಂಶಗಳು :-
4,732 ಕೋಟಿ ರೂ ಬಜೆಟ್​ನಲ್ಲಿ 60% ಹಣ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲು.
ಘನತ್ಯಾಜ್ಯ ನಿರ್ವಹಣೆಗೆ 322 ಕೋಟಿ ರೂ.
ಆರೋಗ್ಯ, ಶಿಕ್ಷಣ, ಕಲ್ಯಾಣ ಕಾರ್ಯಕ್ರಮಗಳಿಗೆ 242 ಕೋಟಿ ರೂ.
ಒಂಟಿ ಮನೆ ಯೋಜನೆಯಡಿ 71 ಕೋಟಿ ರೂ ವೆಚ್ಚದಲ್ಲಿ ವಸತಿ ಯೋಜನೆ.
ಬಡ ಸಮುದಾಯದ ಜನರಿಗೆ 334 ಕೋಟಿ ರು ಸಹಾಯಧನ.
496 ಪಾರ್ಕ್​ಗಳ ನಿರ್ವಹಣೆಗೆ 47 ಕೋಟಿ ರೂ.
100 ಮಿಯಾವಕಿ ಕಾಡುಗಳ ನಿರ್ಮಾಣಕ್ಕೆ ಕ್ರಮ.
49 ಕೆರೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ 30 ಕೋಟಿ ರೂ.
2 ಕೋಟಿ ರೂ ವೆಚ್ಚದಲ್ಲಿ ಮಕ್ಕಳಿಗೆ ಕರ್ನಾಟಕ ದರ್ಶನ ಪ್ರವಾಸ ಯೋಜನೆ10. 5 ವಾರ್ಡ್​ಗಳ ಶಾಲೆಯನ್ನ ಸ್ಮಾರ್ಟ್​​ ಶಾಲೆಗಳನ್ನಾಗಿ ಪರಿವರ್ತಿಸುವುದು.

ದಕ್ಷಿಣ ನಗರ ಪಾಲಿಕೆಗೆ ಸಿಕ್ಕಿದ್ದೇನು? :-
3825 ಕೋಟಿ ರೂ ಬಜೆಟ್​ನಲ್ಲಿ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ 43%.
ಬಿ-ಸ್ಮೈಲ್ ಕಾಮಗಾರಿಗಳಿಗೆ 16%.
ವಿದ್ಯಾರ್ಥಿಗಳಿಗೆ 5 ಕೋಟಿ ರೂ ಅನುದಾನಲ್ಲಿ ಉಚಿತವಾಗಿ ಲ್ಯಾಪ್ ಟಾಪ್.
11.92 ಕೋಟಿ ರೂ ಅನುದಾನದಲ್ಲಿ ಬೀದಿ ವ್ಯಾಪಾರಿಗಳಿಗೆ ಇ-ವೆಂಡಿಂಗ್ ಮಾರಾಟ.
ಪೌರಕಾರ್ಮಿಕರಿಗೆ ಅಂದಾಜು 6 ಕೋಟಿ ರೂ ವೆಚ್ಚದಲ್ಲಿ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ.
ಅಮೃತ ಮಹೋತ್ಸವ ಯೋಜನೆಯಡಿ 1 ಬಿಹೆಚ್​ಕೆ ಫ್ಲಾಟ್ ಖರೀದಿಸಲು 88.25 ಕೋಟಿ ರೂ ಅನುದಾನ.
500 ಬೀದಿ ನಾಯಿಗಳ ಸಾಮರ್ಥ್ಯವಿರುವ ಆಶ್ರಯ ತಾಣ ನಿರ್ಮಾಣ
ಕಸದಿಂದ ರಸ ರೀತಿಯ ಯೋಜನೆಗಳಿಗೆ ಒತ್ತು, ಶೂನ್ಯ ತ್ಯಾಜ್ಯ ವಾರ್ಡ್‌ಗಳನ್ನು ರಚಿಸಲು ಕ್ರಮ.
ಪ್ರಸಕ್ತ ವರ್ಷದಲ್ಲಿ 200 ಇಂಗು ಗುಂಡಿಗಳನ್ನು CSR ಅಡಿ ನಿರ್ಮಿಸಲು ಕ್ರಮ.
ಪಾದಚಾರಿ ಮಾರ್ಗವನ್ನು ಮೇಲ್ದರ್ಜೆಗೆ ಏರಿಸಲು ಮತ್ತು ಸ್ಕೈ ವಾಕ್‌ಗಳ ನಿರ್ಮಾಣ ಮಾಡಲು 50 ಕೋಟಿ ರೂ ಮೀಸಲಿಡಲಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯ ಪೂರ್ವ, ಕೇಂದ್ರ, ಉತ್ತರ, ಪಶ್ಚಿಮ ಹಾಗೂ ದಕ್ಷಿಣ ನಗರ ಪಾಲಿಕೆಗಳು ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ ಸುಮಾರು 20 ಸಾವಿರ ಕೋಟಿ ರೂ ಹಣ ಖರ್ಚು ಮಾಡುವುದಾಗಿ ಬಜೆಟ್ ಮೂಲಕ ಭರವಸೆ ನೀಡಿದೆ. ಇದೆಲ್ಲಾ ಯಾವಾಗ ಕಾರ್ಯರೂಪಕ್ಕೆ ಬರುತ್ತೆ ಅನ್ನೋದನ್ನ ಕಾದುನೋಡಬೇಕಿದೆ.