ಮನೆ ರಾಜ್ಯ ತೋಟದ ಮನೆಯಲ್ಲಿ ಶುಂಠಿ ಕೆಲಸಕ್ಕೆಂದು ಮನೆ ಪಡೆದು ಡ್ರಗ್ಸ್ ತಯಾರಿ; 12 ಕೋಟಿ ರೂ ಮೌಲ್ಯದ...

ತೋಟದ ಮನೆಯಲ್ಲಿ ಶುಂಠಿ ಕೆಲಸಕ್ಕೆಂದು ಮನೆ ಪಡೆದು ಡ್ರಗ್ಸ್ ತಯಾರಿ; 12 ಕೋಟಿ ರೂ ಮೌಲ್ಯದ ಡ್ರಗ್ಸ್ ವಶಕ್ಕೆ..!

0

ಮೈಸೂರು : ರಾಜ್ಯ ಪೊಲೀಸ್‌ ಇಲಾಖೆಯ ಸನ್ಮಿತ್ರ ಯೋಜನೆಯ ಫಲವಾಗಿ ಮೈಸೂರು ಜಿಲ್ಲಾ ಪೊಲೀಸರು, ಮುಂಬಯಿ ನಂಟಿನ ಮಾದಕ ವಸ್ತು ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾದಕ ವಸ್ತು ಪ್ಯಾಕಿಂಗ್‌ ಮತ್ತು ವಿತರಣೆ ಜಾಲದ ರೂವಾರಿಗಳು ಮೈಸೂರನ್ನು ಆಯ್ಕೆ ಮಾಡಿರುವ ಅಂಶ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

ಮಾದಕ ವಸ್ತು ವ್ಯಸನಿಯೊಬ್ಬ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಹುಣಸೂರಿನ ತೋಟದ ಮನೆಯಲ್ಲಿ ದಾಸ್ತಾನಿರಿಸಿದ್ದ 12 ಕೋಟಿ ರೂ. ಮೌಲ್ಯದ 48 ಕೆಜಿ ತೂಕದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಒಬ್ಬನನ್ನು ಬಂಧಿಸಲಾಗಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ. ತೋಟದ ಮನೆಯನ್ನು ಬಾಡಿಗೆ ನೀಡಿದ್ದ ವ್ಯಕ್ತಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ.

ಮುಂಬಯಿನ ನಾಲ್ಕು ಮಂದಿಯೊಂದಿಗೆ ಮೈಸೂರಿನ ಇಬ್ಬರು ಸ್ಥಳೀಯರು ಈ ಜಾಲದಲ್ಲಿದ್ದು, ಮುಂಬಯಿಯಿಂದ ಮಾದಕ ವಸ್ತುವನ್ನು ತಂದು ಮೈಸೂರು ಸೇರಿದಂತೆ ರಾಜ್ಯದೆಲ್ಲೆಡೆ ವಿತರಿಸುವ ಯೋಜನೆ ರೂಪಿಸಿದ್ದರು. ಜಾಲದಲ್ಲಿನ ಒಬ್ಬನನ್ನು ಈಗಾಗಲೇ ಜೈಲಿಗಟ್ಟಿರುವ ಪೊಲೀಸರು, ಉಳಿದ ಐದು ಮಂದಿ ಪತ್ತೆಗೆ ಶೋಧ ಆರಂಭಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಮೈಸೂರು ಜಿಲ್ಲೆಯಲ್ಲಿ ಸನ್ಮಿತ್ರ ಯೋಜನೆಯನ್ನು ಜಾರಿಗೊಳಿಸಿ ಮಾದಕ ವ್ಯಸನಿಗಳ ಮೇಲೆ ನಿಗಾ ಇರಿಸಿದ್ದ ಪೊಲೀಸರು, ವ್ಯಸನಿಯೊಬ್ಬ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ಬೃಹತ್‌ ಜಾಲವನ್ನೇ ಪತ್ತೆ ಹಚ್ಚಿದ್ದಾರೆ.

ಹುಣಸೂರು ತಾಲೂಕಿನ ದಾಸನಪುರದಲ್ಲಿರುವ ತೋಟದ ಮನೆಯೊಂದರ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು, ಶೇಖರಿಸಿಟ್ಟಿದ್ದ 7.35 ಕೆಜಿ ತೂಕದ ಮೆಫೆಡ್ರೋನ್‌ ಮತ್ತು 41 ಕೆಜಿ ತೂಕದ ಮಾದಕ ವಸ್ತು ತಯಾರಿಕೆಗೆ ಬಳಸುವ ರಾಸಾಯನಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆ ವೇಳೆ ದಂಧೆಯಲ್ಲಿ ಮೈಸೂರಿನ ಸಿದ್ದಿಖಿ ನಗರದ ಮಹಮ್ಮದ್‌ ಇರ್ಫಾನ್‌, ತೋಟ ಬಾಡಿಗೆ ನೀಡಿದ್ದ ಹುಣಸೂರು ಪಟ್ಟಣದ ಮಹಮ್ಮದ್‌ ಇರ್ಫಾನ್‌ ಬಂಧಿತರಾಗಿದ್ದು, ಇನ್ನೂ ಐವರ ಬಂಧನಕ್ಕೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಜಿಲ್ಲಾಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ತೋಟದ ಮನೆಯನ್ನು ವಾರದ ಹಿಂದೆಯಷ್ಟೇ ಬಾಡಿಗೆ ಪಡೆದಿದ್ದ ಡ್ರಗ್ಸ್‌ ಪೆಡ್ಲರ್‌ಗಳು, ಗೂಡ್ಸ್‌ ವಾಹನ ಮತ್ತು ಟ್ರ್ಯಾಕ್ಟರ್‌ ಮೂಲಕ ಮಾದಕ ವಸ್ತು ಸೇರಿದಂತೆ ಕಚ್ಚಾ ಪದಾರ್ಥಗಳನ್ನು ಇಲ್ಲಿಗೆ ತಂದಿರಿಸಿದ್ದರು. ಮಾದಕ ವಸ್ತುವಿಗೆ ಪೂರಕವಾದ ಕೆಲ ರಾಸಾಯನಿಕಗಳನ್ನು ಆನ್‌ಲೈನ್‌ ಮೂಲಕವು ತರಿಸಿಕೊಳ್ಳಲಾಗಿತ್ತು. ಜತೆಗೆ ಕೆಲ ಯಂತ್ರೋಪಕರಣಗಳು ಪತ್ತೆಯಾಗಿವೆ.

ತೋಟದ ಮಾಲೀಕರಿಗೆ ಶುಂಠಿ ಬೆಳೆಯ ದಾಸ್ತಾನಿಗಾಗಿ ಮನೆ ಬೇಕೆಂದು ತಿಂಗಳ ಹಿಂದೆಯೇ ಬಾಡಿಗೆಗೆ ಪಡೆಯಲಾಗಿತ್ತು. ತೋಟವು ಗ್ರಾಮದಿಂದ ದೂರವಿದ್ದು, ಮನೆಯನ್ನು ತೋಟದೊಳಗೆ ಸಾಕಷ್ಟು ದೂರದಲ್ಲಿ ಕಟ್ಟಲಾಗಿತ್ತು. ಪ್ರವೇಶ ದ್ವಾರದ ಗೇಟ್‌ನಿಂದ ಮನೆಗೆ ತೆರಳಲು ಸಾಕಷ್ಟು ದೂರವಿದ್ದು, ರಸ್ತೆಗೆ ಮನೆಯೇ ಕಾಣುತ್ತಿರಲಿಲ್ಲ. ಕಚ್ಚಾ ರಸ್ತೆಯ ಮೂಲಕವೇ ತೋಟದ ಮನೆಗೆ ಸಾಗಬೇಕಿದ್ದರಿಂದ ಅಲ್ಲಿನ ವ್ಯವಹಾರಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಯದಂತೆ ಖದೀಮರು ಎಚ್ಚರಿಕೆ ವಹಿಸಿದ್ದರು.

ಮೈಸೂರಿಗೆ ಬಂದಿರುವ ಮಾದಕ ವಸ್ತುವಿಗೆ ಮುಂಬಯಿಯ ನಂಟಿದ್ದು, ಮುಂಬಯಿನಲ್ಲಿದ್ದ ನಾಲ್ವರು ಡ್ರಗ್ಸ್‌ ರೂವಾರಿಗಳೊಂದಿಗೆ ಮೈಸೂರಿನ ಇಬ್ಬರು ಆರು ತಿಂಗಳಿನಿಂದ ಸಂಪರ್ಕದಲ್ಲಿದ್ದರು. ಸ್ಥಳೀಯರ ಸಹಕಾರದಿಂದ ಅಲ್ಲಿನ ಡ್ರಗ್ಸ್‌ ಜಾಲದಲ್ಲಿದ್ದವರು ಮೈಸೂರಿಗೆ ತಂದು ಇಲ್ಲಿಂದ ಬೇರೆಡೆಗೆ ವಿತರಿಸುವ ಉದ್ದೇಶ ಹೊಂದಿದ್ದರು.

ಕಚ್ಚಾ ಮಾದಕ ವಸ್ತುಗಳೊಂದಿಗೆ ಸಿದ್ಧಪಡಿಸಿದ್ದ ಮಾದಕ ವಸ್ತು ಕೂಡ ಇಲ್ಲಿಸಿಕ್ಕಿದ್ದು, 50 ಗ್ರಾಂನಿಂದ ಅರ್ಧ ಕೆಜಿಯವರೆಗೆ ಪ್ಯಾಕ್‌ ಮಾಡಿದ್ದ 16 ಪ್ಯಾಕೆಟ್‌ಗಳು ಪತ್ತೆಯಾಗಿವೆ. ಪತ್ತೆಯಾಗಿರುವ ಮೆಫೆಡ್ರೋನ್‌ ಡ್ರಗ್ಸ್‌ಗೆ 1 ಕೆಜಿಗೆ 30 ಲಕ್ಷ ರೂ. ಇದ್ದು, 7.35 ಕೆಜಿ ತೂಕದ ಡ್ರಗ್ಸ್‌ ಒಂದೇ ಕಡೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಿಕ್ಕಿದೆ.

ಮಾದಕ ವಸ್ತು ಜಾಲವನ್ನು ಪತ್ತೆ ಹಚ್ಚಲು ಡಿವೈಎಸ್ಪಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ. ಜಾಲದಲ್ಲಿನ ರೂವಾರಿಗಳ ಪತ್ತೆಗೆ ಪೊಲೀಸರು, ಮುಂಬಯಿ ಸೇರಿದಂತೆ ನೆರೆ ರಾಜ್ಯಗಳಿಗೆ ತೆರಳಿದ್ದಾರೆ.