ಮನೆ ರಾಜ್ಯ ವಿಮಾನ ನಿಲ್ದಾಣದ ಕಾಂಪೌಂಡ್‌ ಹಾರಿ ಒಳಗೆ ನುಗ್ಗಿದ ಕರಡಿ

ವಿಮಾನ ನಿಲ್ದಾಣದ ಕಾಂಪೌಂಡ್‌ ಹಾರಿ ಒಳಗೆ ನುಗ್ಗಿದ ಕರಡಿ

0

ಶಿವಮೊಗ್ಗ : ಆಹಾರ ಅರಸುತ್ತ ಬಂದ ಕರಡಿಯೊಂದು ಶಿವಮೊಗ್ಗದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದ ಒಳಗೆ ನುಗ್ಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಸೆರೆ ಹಿಡಿದಿದ್ದಾರೆ. ಇಂದು (ಮಾ.30) ವಿಮಾನ ನಿಲ್ದಾಣದ ಪಕ್ಕದ ವಿನಾಯಕ ನಗರದಲ್ಲಿ ಕರಡಿ ಕಾಣಿಸಿಕೊಂಡಿತ್ತು.

ಅಲ್ಲಿನ ಮನೆಗಳು, ತೋಟಗಳ ಪಕ್ಕದಲ್ಲಿ ಓಡಾಡಿತ್ತು. ಈ ವಿಚಾರ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕರಡಿ ವಿಮಾನ ನಿಲ್ದಾಣದ ಕಾಂಪೌಂಡ್‌ ಜಿಗಿದು ಒಳಗೆ ಹೋಗಿದೆ. ಕರಡಿಯ ಓಡಾಟ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ವಿಮಾನ ನಿಲ್ದಾಣದ ಕಾಂಪೌಂಡ್‌ ಒಳಗೆ ಪೊದೆ ಬೆಳೆದಿದ್ದು, ಸ್ವಲ್ಪ ಸಮಯ ಕರಡಿ ಅವಿತು ಕೊಂಡಿತ್ತು. ಬಳಿಕ ಶೋಧ ನಡೆಸಿದಾಗ ಕರಡಿ ಮತ್ತೆ ಮನೆಗಳ ಕಡೆ ಓಡಿ ಹೋಗಿತ್ತು. ಬಳಿಕ ಜ್ಯೋತಿ ನಗರದ ಶಾಲೆಯ ಬಳಿ ಕುಳಿತಿದ್ದ ಕರಡಿಗೆ ಅರವಳಿಕೆ ನೀಡಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ.

ಭದ್ರಾ ಅಭಯಾರಣ್ಯ ವ್ಯಾಪ್ತಿಯ ಆಸ್ಪತ್ರೆಗೆ ಸೆರೆ ಹಿಡಿದ ಕರಡಿಯನ್ನು ಸ್ಥಳಾಂತರಿಸಲಾಗಿದೆ. ಎರಡು ದಿನ ನಿಗಾ ಇರಿಸಿ ಬಳಿಕ ಪುನರ್ವಸತಿ ಕೇಂದ್ರಕ್ಕೆ ಕರಡಿಯನ್ನು ಶಿಫ್ಟ್ ಮಾಡಲು ನಿರ್ಧಾರಿಸಲಾಗಿದೆ. ಇದು ಹೆಣ್ಣು ಕರಡಿಯಾಗಿದ್ದು, ಅದರ ಕೊರಳಲ್ಲಿ ರೇಡಿಯೋ ಕಾಲರ್ ಪತ್ತೆಯಾಗಿದೆ. ಬಳ್ಳಾರಿಯ ದಾರೋಜಿ ಕರಡಿಧಾಮದ ಕಡೆಯಿಂದ ಬಂದಿರುವ ಸಾಧ್ಯತೆ ಇದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.