ಮನೆ ರಾಜಕೀಯ ಪ್ರಜಾಪ್ರಭುತ್ವ ಮುಕ್ತ ಭಾರತ ನಿರ್ಮಾಣ ಬಿಜೆಪಿಯ ಭವ್ಯಗುರಿ: ಹೆಚ್ ಡಿಕೆ

ಪ್ರಜಾಪ್ರಭುತ್ವ ಮುಕ್ತ ಭಾರತ ನಿರ್ಮಾಣ ಬಿಜೆಪಿಯ ಭವ್ಯಗುರಿ: ಹೆಚ್ ಡಿಕೆ

0

ಬೆಂಗಳೂರು(Bengaluru): ಆಪರೇಷನ್‌ ದಕ್ಷಿಣ್‌ ಅಂದರೆ, ಆಪರೇಷನ್‌ ಕಮಲದ ರಾಷ್ಟ್ರೀಕರಣ & ತುಷ್ಠೀಕರಣ. ಶಾಸಕರ ಖರೀದಿ, ಕುದುರೆ ವ್ಯಾಪಾರ, ಕರ್ನಾಟಕದ ನಂತರ ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರ ಪ್ರದೇಶಕ್ಕೂ ‌ವಿಸ್ತರಿಸುವ ಡೋಂಗೀ ರಾಷ್ಟ್ರಪ್ರೇಮಿಗಳ ರಾಜಕಾರಣ. ದಕ್ಷಿಣದ ಮೇಲೆ ಆಪರೇಷನ್‌ ಕಮಲದ ದುರಾಕ್ರಮಣ ಎಂದು ಮಾಜಿ ಮುಖ್ಯಮಂತ್ರ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್‌ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲಎಂಬ ಸಿ.ಟಿ.ರವಿ  ಹೇಳಿಕೆಗೆ ಪ್ರತಿಕ್ರಿಯಿಸಿ ಆಪರೇಷನ್ ದಕ್ಷಿಣ್ ಹ್ಯಾಶ್ ಟ್ಯಾಗ್ ಅಡಿ ಸರಣಿ ಟ್ವೀಟ್ ಮಾಡಿರುವ ಅವರು, ಆಪರೇಷನ್‌ ದಕ್ಷಿಣ್‌ ಅಂದರೆ, ಬಿಜೆಪಿ ಪರಿವಾರ ರಾಜಕಾರಣವನ್ನು ಮತ್ತಷ್ಟು ಬಲಪಡಿಸುವುದಾ? ಆಗ ಕಾಂಗ್ರೆಸ್‌ ಮುಕ್ತ ಭಾರತ! ಈಗ ಪರಿವಾರಮುಕ್ತ ಭಾರತ!‌ ನಂತರ ಪ್ರತಿಪಕ್ಷ ಮುಕ್ತ ಭಾರತ! ಮುಂದೆ ಸಂಪೂರ್ಣ ಪ್ರಜಾಪ್ರಭುತ್ವ ಮುಕ್ತ ಭಾರತ್‌ ನಿರ್ಮಾಣ! ಇದಲ್ಲವೇ ನಿಮ್ಮ ಬಿಜೆಪಿಯ ಭವ್ಯಗುರಿ? ಉತ್ತರಿಸಿ ಸಿ.ಟಿ.ರವಿಯವರೇ ಎಂದು ಪ್ರಶ್ನೆ ಕೇಳಿದ್ದಾರೆ.

ರವಿ ಅವರೇ, ಆಂತರಿಕ ಪ್ರಜಾಪ್ರಭುತ್ವ ಎಂದರೆ, ನರೇಂದ್ರ ಮೋದಿ ಮುಂದೆ ʼಸತ್ತಸೊಂಟʼದವರಂತೆ ನಡುಬಗ್ಗಿಸಿ ತಲೆ ಅಲ್ಲಾಡಿಸುವುದಾ? ಜೀ ಜೀ ಎನ್ನುತ್ತಾ ಜೀ ಹುಜೂರ್‌ ಎನ್ನುವುದಾ? 25 ಸಂಸದರ ಯೋಗ್ಯತೆ ಏನು? ಅವರಿಗೆಷ್ಟು ಸ್ವಾತಂತ್ರ್ಯ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಹೈದರಾಬಾದ್‌ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಭಾವನಾನ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು, ಜನರ ಮನಸ್ಸುಗಳನ್ನು ಒಡೆದು ʼರಾವಣ ರಾಜಕೀಯʼದ ವಿನಾಶಕಾರಿ ದಾರಿಗೆ ಹಿಡನ್‌ ಅಜೆಂಡಾ ಸಿದ್ಧ ಮಾಡಲಾಯಿತಾ? ನೆಮ್ಮದಿಯ ಸಮಾಜಕ್ಕೆ ಕೋಮುವಿಷ ಪ್ರಾಶಣ ಮಾಡುವ  ಇಂಜೆಕ್ಷನ್. ಧರ್ಮ, ದೇವರು, ಜಾತಿ, ಭಾಷೆ, ಆಚಾರ, ಆಹಾರ, ವ್ಯಾಪಾರಗಳನ್ನು ಎಳೆತಂದು, ಅಸಹಿಷ್ಣುತೆ ಸೃಷ್ಟಿಸಿ ಭಾರತವನ್ನು ಧರ್ಮದ ಆಧಾರದಲ್ಲಿ ಒಡೆದುಹಾಕುವುದಾ? ಕರ್ನಾಟಕದ ನಂತರ ನಿಮ್ಮ ಮುಂದಿನ ಗುರಿ ದಕ್ಷಿಣ ಭಾರತ. ಹೌದಲ್ಲವೇ  ಎಂದು ಕೇಳಿದ್ದಾರೆ.

ಆಪರೇಷನ್‌ ಕಮಲಕ್ಕೆ ಬ್ರ್ಯಾಂಡ್‌ ಅಂಬಾಸಿಡರ್‌ ಒಬ್ಬರು ಬೇಕಲ್ಲವೇ? ‌ ಬಿ.ಎಸ್.‌ಯಡಿಯೂರಪ್ಪ ಅವರನ್ನೇ  ಬ್ರ್ಯಾಂಡ್‌ ರಾಯಭಾರಿ ಮಾಡುತ್ತೀರಾ? ಕಾರ್ಯಕಾರಿಣಿಯಲ್ಲಿ ಇದೂ  ಚರ್ಚೆಗೆ ಬಂತಾ? ಮೋದಿ ಸಾಹೇಬರು ಒಪ್ಪಿದರಾ? ಎಷ್ಟಾದರೂ ನಿಮ್ಮ ಅಮಿತೋತ್ಸಾಹಕ್ಕೆ ಆಪರೇಷನ್‌ ಕಮಲವೇ ಕಾರಣ, ಅಲ್ಲವೇ?

ದಕ್ಷಿಣದಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಶಕ್ತಿ. ಇಲ್ಲಿ ಹೆಜ್ಜೆ ಇಡಲು ಬಿಜೆಪಿಗೆ ಆಗುತ್ತಿಲ್ಲ. ಆಪರೇಷನ್‌ ಕಮಲದಿಂದ ಕರ್ನಾಟಕದಲ್ಲಿ ಅಧಿಕಾರ ಹಿಡಿದಿರಿ. ಒಡಿಶಾ, ತೆಲಂಗಾಣ, ಆಂಧ್ರ, ತಮಿಳುನಾಡು, ಕೇರಳದಲ್ಲಿ ನಿಮ್ಮ ಬೇಳೆ ಬೇಯಲಿಲ್ಲ. ಅದಕ್ಕೀಗ ʼಪರಿವಾರಮುಕ್ತ ರಾಜಕೀಯʼ ಎಂದು ರಾಗ ತೆಗೆಯುತ್ತಿದ್ದೀರಿ. ಸತ್ಯ ಹೇಳಿ, ಪ್ರಾದೇಶಿಕ ಪಕ್ಷಗಳನ್ನು ಎದುರಿಸಲಾಗದ ಬಿಜೆಪಿ, ಈಗ ಪರಿವಾರ ಜಪ ಮಾಡುತ್ತಿದೆ. ಅಯ್ಯೋ ಪಾಪ!! ಮಹಾರಾಷ್ಟ್ರದಲ್ಲಿ ಆಪರೇಷನ್‌ ಕಮಲ ಮಾಡಿ ನೀವು ಮುಖ್ಯಮಂತ್ರಿ ಮಾಡಿದ ಏಕನಾಥ ಶಿಂಧೆ ಅವರ ʼಏಕಪರಿವಾರ ಪಾಲಿಟಿಕ್ಸ್‌ʼ ಗೊತ್ತಿರಲಿಲ್ಲವೇ? ಬೋದನೆ ಒಂದು! ಬೋಜನ ಇನ್ನೊಂದು!! ಛೇ, ಹೇಸಿಗೆ ಎಂದು ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಯಡಿಯೂರಪ್ಪ & ಸನ್ಸ್‌, ರವಿ ಸುಬ್ರಹ್ಮಣ್ಯ-ತೇಜಸ್ವಿಸೂರ್ಯ, ಅಶೋಕ್-ರವಿ, ಸೋಮಣ್ಣ-ಅರುಣ್‌ ಸೋಮಣ್ಣ, ಲಿಂಬಾಳಿ-ರಘು, ವಿಶ್ವನಾಥ್-ವಾಣಿ ವಿಶ್ವನಾಥ್‌, ಶೆಟ್ಟರ್-ಪ್ರದೀಪ್‌ ಶೆಟ್ಟರ್‌, ನಿರಾಣಿ-ಹನುಮಂತ ನಿರಾಣಿ, ಜಿ.ಎಸ್.ಬಸವರಾಜು-ಜ್ಯೋತಿ ಗಣೇಶ್ & ಜಾರಕಿಹೊಳಿ, ಕತ್ತಿ, ಅಂಗಡಿ, ಉದಾಸಿ ಕುಟುಂಬಗಳು.. ಇದೆಲ್ಲಾ ಏನು ? ಪರಿವಾರ ರಾಜಕಾರಣಕ್ಕೆ ಬಿಜೆಪಿ ಅತೀತವಲ್ಲ. ರಾಜ್ಯದ  ಲೆಕ್ಕ ಕೊಟ್ಟಿದ್ದೇನೆ. ಭಾರತದ ಪಟ್ಟಿ ಕೊಡಲೇ? ಅಬ್ಬರ ಜಾಸ್ತಿ, ಅಭಿವೃದ್ಧಿ ನಾಸ್ತಿ. ಇದು ಬಿಜೆಪಿ ನೀತಿ. ಆಪರೇಷನ್‌ ದಕ್ಷಿಣ್‌ ಅಲ್ಲ, ಬಿಜೆಪಿ ಅಸ್ತಿತ್ವಕ್ಕೇ ಆಪರೇಷನ್‌ ಆಗುವ ಕಾಲ ಹತ್ತಿರದಲ್ಲೇ ಇದೆ. ಎಂದು ಹೇಳಿದ್ದಾರೆ.