ಮನೆ ರಾಜ್ಯ ಪಿಎಸ್‌ ಐ ನೇಮಕಾತಿ ಅಕ್ರಮ: ಬಂಧಿತ ಎಡಿಜಿಪಿ ಅಮೃತ್‌ ಪೌಲ್‌ 10 ದಿನ ಸಿಐಡಿ ವಶಕ್ಕೆ

ಪಿಎಸ್‌ ಐ ನೇಮಕಾತಿ ಅಕ್ರಮ: ಬಂಧಿತ ಎಡಿಜಿಪಿ ಅಮೃತ್‌ ಪೌಲ್‌ 10 ದಿನ ಸಿಐಡಿ ವಶಕ್ಕೆ

0

ಬೆಂಗಳೂರು (Bengaluru): ಪಿಎಸ್ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಎಡಿಜಿಪಿ ಅಮೃತ್ ಪೌಲ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಸಿಐಡಿ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಮೂರು ಬಾರಿ ವಿಚಾರಣೆ ಎದುರಿಸಿದ್ದ ಅಮೃತ್ ಪೌಲ್ ರನ್ನು ಇಂದು ಬೆಳಿಗ್ಗೆ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅಮೃತ್ ಪೌಲ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಾಯಿತು. ಆರೋಪಿ ಅಧಿಕಾರಿಯನ್ನು ವಿಚಾರಣೆ ನಡೆಸಿದ ಕೋರ್ಟ್, ಹೆಚ್ಚಿನ ವಿಚಾರಣೆಗಾಗಿ ಜುಲೈ 13ರವರೆಗೆ ಸಿಐಡಿ ವಶಕ್ಕೆ ಒಪ್ಪಿಸಿದೆ.

ಅಮೃತ್ ಪೌಲ್ 25 ಅಭ್ಯರ್ಥಿಗಳ ಜೊತೆ 30 ಲಕ್ಷ ರೂಪಾಯಿ ಡೀಲ್ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿಚಾರಣೆ ನಡೆಸಲು ಸಿಐಡಿ ಅವರನ್ನು ಬಂಧಿಸಿದೆ.

545 ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಅಮೃತ್ ಪೌಲ್ ಅವರಿಗೆ ಹಲವು ದೂರುಗಳು ಬಂದಿದ್ದು, ಇದನ್ನು ಅವರು ನಿರ್ಲಕ್ಷಿಸಿದ್ದರು ಎಂಬ ಆರೋಪ ಸಹ ಅವರ ವಿರುದ್ಧ ಕೇಳಿಬಂದಿತ್ತು. ಅಕ್ರಮ ಬಯಲಿಗೆ ಬರುತ್ತಿದ್ದಂತೆ ಅಮೃತ್ ಪೌಲ್ ಅವರ ವರ್ಗಾವಣೆಗೆ ಒತ್ತಡ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ನೇಮಕಾತಿ ವಿಭಾಗದ ಎಡಿಜಿಪಿ ಹುದ್ದೆಯಿಂದ ವರ್ಗಾಯಿಸಲಾಗಿತ್ತು.

ಪಿಎಸ್‌ಐ ಹುದ್ದೆಗಳ ಡೀಲ್ ನಡೆದಾಗ ಅಮೃತ್ ಪೌಲ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದರು. ಡಿವೈಎಸ್‌ಪಿ ಹಾಗೂ ಎಫ್‌ಡಿಎಯೊಂದಿಗೆ ಸೇರಿ ಅಮೃತ್ ಪೌಲ್ ಡೀಲ್ ಮಾಡಿಸಿದ್ದಾರೆ ಎಂಬ ಆರೋಪವಿದೆ.