ಮನೆ ಕ್ರೀಡೆ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​-19; ನಮಗೆ ಆರ್‌ಸಿಬಿ ಅಂದ್ರೆ ಭಯ… ವ್ಯಂಗ್ಯವಾಡಿದ ಸೆಹ್ವಾಗ್..!

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​-19; ನಮಗೆ ಆರ್‌ಸಿಬಿ ಅಂದ್ರೆ ಭಯ… ವ್ಯಂಗ್ಯವಾಡಿದ ಸೆಹ್ವಾಗ್..!

0

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​-19 ರಂಗೇರುತ್ತಿರುವ ಬೆನ್ನಲ್ಲೇ, ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ನೀಡಿರುವ ಒಂದು ಹೇಳಿಕೆ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅದು ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ತುಚ್ಛವಾಗಿ ಕಾಣುವ ಮೂಲಕ. ಅಂದರೆ ತಾನು ಐಪಿಎಲ್ ಆಡುತ್ತಿದ್ದ ಸಮಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ಹೇಗೆ ನೋಡುತ್ತಿದ್ದೆವು ಎಂಬ ವಿಚಾರವನ್ನು ಸೆಹ್ವಾಗ್ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಸೆಹ್ವಾಗ್ ಅವರ ಪ್ರಕಾರ, ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಆಡುವಾಗ ಅವರಿಗೆ ಯಾವುದೇ ಭಯವಿರುತ್ತಿರಲಿಲ್ಲ. “ಸಿಎಸ್‌ಕೆ ಸೋಲಿಸುವುದು ಕಷ್ಟ ಎಂಬುದು ನಮಗೆ ತಿಳಿದಿತ್ತು, ಹಾಗಾಗಿ ಅವರ ವಿರುದ್ಧ ಗೆದ್ದರೆ ಅದು ನಮಗೆ ‘ಬೋನಸ್’ ಎಂದು ಭಾವಿಸುತ್ತಿದ್ದೆವು” ಎಂದಿದ್ದಾರೆ. ಆದರೆ ಅಸಲಿ ಭಯವಿದ್ದುದು ಆರ್‌ಸಿಬಿ ಮತ್ತು ಡೆಲ್ಲಿ ವಿರುದ್ಧ ಆಡುವಾಗವಂತೆ..!

“ಆರ್‌ಸಿಬಿ ಮತ್ತು ಡೆಲ್ಲಿ ತಂಡಗಳ ವಿರುದ್ಧದ ಪಂದ್ಯಗಳನ್ನು ನಾವು ‘ಫ್ರೀ ಪಾಯಿಂಟ್ಸ್’ (ಸುಲಭದ ಅಂಕಗಳು) ಎಂದು ಪರಿಗಣಿಸುತ್ತಿದ್ದೆವು. ಈ ಪಂದ್ಯಗಳನ್ನು ನಾವು ಯಾವುದೇ ಕಾರಣಕ್ಕೂ ಸೋಲಬಾರದು ಎಂಬ ದೊಡ್ಡ ಒತ್ತಡ ನಮ್ಮ ಮೇಲಿರುತ್ತಿತ್ತು. ಟೇಬಲ್‌ನಲ್ಲಿ ಮೇಲೆ ಬರಲು ಈ ಎರಡು ಅಂಕಗಳು ಅತ್ಯಂತ ಸುಲಭ ಮತ್ತು ಅನಿವಾರ್ಯವಾಗಿದ್ದವು” ಎಂದು ಸೆಹ್ವಾಗ್ ಹೇಳಿದ್ದಾರೆ.

ನಾವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ನಮಗೆ ಅಂಕಗಳನ್ನು ನೀಡುವ ತಂಡಗಳೆಂದೇ ನೋಡುತ್ತಿದ್ದೆವು. ಹೀಗಾಗಿಯೇ ಅವರ ವಿರುದ್ಧ ಸೋತು ಬಿಟ್ಟರೆ ಎಂಬ ಭಯ ಕಾಡುತ್ತಿತ್ತು ಎಂದು ವೀರೇಂದ್ರ ಸೆಹ್ವಾಗ್ ವ್ಯಂಗ್ಯವಾಡಿದ್ದಾರೆ.

ವೀರೇಂದ್ರ ಸೆಹ್ವಾಗ್ ಅವರ ಈ ಹಳೆಯ ಅನುಭವದ ಮಾತುಗಳು ಇಂದಿನ ಐಪಿಎಲ್ 2026ಕ್ಕೆ ಅನ್ವಯಿಸುವುದಿಲ್ಲ. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಸ್ತುತ ಐಪಿಎಲ್​ನ ಬಲಿಷ್ಠ ತಂಡ. ಅದರಲ್ಲೂ ಕಳೆದ ಸೀಸನ್‌ನಲ್ಲಿ (2025) ಚಾಂಪಿಯನ್ ಆಗಿ ಹೊರಹೊಮ್ಮಿರುವ ಆರ್‌ಸಿಬಿ, ಈಗ ‘ಡಿಫೆಂಡಿಂಗ್ ಚಾಂಪಿಯನ್ಸ್’ ಪಟ್ಟದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ಕಾಮೆಂಟ್ರಿ ಮಾಡುವಾಗ ಇತರೆ ತಂಡಗಳ ಅಭಿಮಾನಿಗಳನ್ನು ಕೆಣಕುವ ರೀತಿಯಲ್ಲಿ ಮಾತನಾಡುವ ವೀರೇಂದ್ರ ಸೆಹ್ವಾಗ್ ವಿರುದ್ಧ ಇದೀಗ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಫ್ರೀ ಪಾಯಿಂಟ್ಸ್ ಹೇಳಿಕೆ ನೀಡಿರುವ ಸೆಹ್ವಾಗ್ ಎಷ್ಟು ಐಪಿಎಲ್ ಟ್ರೋಫಿ ಗೆದ್ದಿದ್ದಾರೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳನ್ನೆತ್ತಿದ್ದಾರೆ.