ಅಂಡಮಾನ್(Andaman): ಅಂಡಮಾನ್ ಸಮುದ್ರದಲ್ಲಿ ಸರಣಿ ಭೂಕಂಪ ಸಂಭವಿಸಿದೆ. ಮಂಗಳವಾರ ಬೆಳಗ್ಗೆ 5:57ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆಯು ದಾಖಲಾಗಿದೆ.
ಅಂಡಮಾನ್ ಮತ್ತು ನಿಕೋಬಾರ್ ಅವಳಿ ದ್ವೀಪಗಳಲ್ಲಿ ಜುಲೈ 4 ಮತ್ತು ಜುಲೈ 5ರಂದು ಸರಣಿ ಭೂಕಂಪನ ಸಂಭವಿಸಿರುವ ಕುರಿತು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದ್ದು, ಜುಲೈ 5ರ ಮಂಗಳವಾರ ಬೆಳಗ್ಗೆ ಸಂಭವಿಸಿದ ಭೂಕಂಪನದ ಕೇಂದ್ರಬಿಂದು ರಾಜಧಾನಿ ಪೋರ್ಟ್ ಬ್ಲೇರ್‌ನಿಂದ 215 ಕಿ. ಮೀ. ದೂರದಲ್ಲಿದೆ ಎಂದು ಮಾಹಿತಿ ನೀಡಿದೆ.
ಭೂಕಂಪನದಿಂದ ಯಾವುದೇ ಸಾವು-ನೋವು ಮತ್ತು ಆಸ್ತಿಪಾಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ.
ಸೋಮವಾರ ಸಂಜೆಯೂ ಭೂಕಂಪನ:
ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಸೋಮವಾರ ಸಂಜೆ 5.18ರ ವೇಳೆಯಲ್ಲೂ ದ್ವೀಪಗಳ ಸುತ್ತಲಿನ ಪ್ರದೇಶದಲ್ಲಿ ಮೊದಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.6ರಷ್ಟು ತೀವ್ರತೆ ದಾಖಲಾಗಿದೆ. ಕೆಲಹೊತ್ತಿನ ನಂತರದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 4.5ರಷ್ಟು ತೀವ್ರತೆ ವರದಿಯಾಗಿದೆ.