ಮನೆ ರಾಜ್ಯ ಬೆಂಗಳೂರಿಗರಿಗೆ ಗುಡ್​​ ನ್ಯೂಸ್​​ ಕೊಟ್ಟ BWSSB; OTS ಯೋಜನೆ ಜಾರಿ..!

ಬೆಂಗಳೂರಿಗರಿಗೆ ಗುಡ್​​ ನ್ಯೂಸ್​​ ಕೊಟ್ಟ BWSSB; OTS ಯೋಜನೆ ಜಾರಿ..!

0

ಬೆಂಗಳೂರು : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಗರದ ನಿವಾಸಿಗಳಿಗೆ ಗುಡ್​​ ನ್ಯೂಸ್​​ ನೀಡಿದೆ. ಬಾಕಿ ಇರುವ ನೀರಿನ ಬಿಲ್‌ಗಳನ್ನು ವಸೂಲಿ ಮಾಡುವ ಉದ್ದೇಶದಿಂದ ಮೂರು ತಿಂಗಳ ಅವಧಿಗೆ ಒನ್ ಟೈಮ್ ಸೆಟಲ್‌ಮೆಂಟ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಂಡಳಿಯ ಅಧ್ಯಕ್ಷ ರಾಮ ಪ್ರಸಾತ್ ಮನೋಹರ್, ಪ್ರಸ್ತುತ ನೀರಿನ ಬಿಲ್‌ಗಳ ಜೊತೆಗೆ OTS ನೋಟಿಸ್‌ಗಳನ್ನು ನೀಡಲಾಗುವುದು. BWSSB ವ್ಯಾಪ್ತಿಯ ಸುಮಾರು 11 ಲಕ್ಷ ನೀರಿನ ಸಂಪರ್ಕಗಳಲ್ಲಿ, 5.11 ಲಕ್ಷ ಗ್ರಾಹಕರಿಗೆ ಸಂಬಂಧಿಸಿ ಬಾಕಿ ಬಿಲ್‌ಗಳು ಇರುವುದಾಗಿ ಅವರು ತಿಳಿಸಿದ್ದಾರೆ.

ಅಂಕಿಅಂಶಗಳ ಪ್ರಕಾರ, ಫೆಬ್ರವರಿ ಅಂತ್ಯದ ವೇಳೆಗೆ ಬಾಕಿ ಇರುವ ನೀರಿನ ಬಿಲ್‌ಗಳ ಒಟ್ಟು ಮೊತ್ತ 851.33 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಮೂಲ ಮೊತ್ತ 539.43 ಕೋಟಿ ರೂಪಾಯಿ ಹಾಗೂ ಬಡ್ಡಿ 311.90 ಕೋಟಿ ರೂಪಯಿಗಳು ಸೇರಿವೆ. ಈ ಬಾಕಿ ಮೊತ್ತವನ್ನು ಸುಲಭವಾಗಿ ತೀರಿಸಲು ಏಪ್ರಿಲ್‌ನಿಂದ ಜೂನ್‌ವರೆಗೆ OTS ಯೋಜನೆಯನ್ನು ಜಾರಿಗೆ ತರಲಾಗಿದೆ. OTS ಯೋಜನೆಗೆ ಅರ್ಹರಾಗಿರುವ ಗ್ರಾಹಕರಿಗೆ ಈ ತಿಂಗಳ ನೀರಿನ ಬಿಲ್ ಜೊತೆಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ ಎಂದು ರಾಮ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಬಾಕಿ ಇರುವ ಮೂಲ ಮೊತ್ತ, ಮನ್ನಾ ಮಾಡಲಾಗುವ ಬಡ್ಡಿ ಮೊತ್ತ, ಅಂತಿಮವಾಗಿ ಪಾವತಿಸಬೇಕಾದ ಮೊತ್ತ, ಪಾವತಿ ವಿಧಾನಗಳು ಹಾಗೂ ಯೋಜನೆಯ ಅರ್ಹತಾ ಮಾನದಂಡಗಳ ವಿವರಗಳನ್ನು ಪ್ರತ್ಯೇಕ ಪತ್ರದ ಮೂಲಕ ಬಿಲ್ ಜೊತೆ ಸೇರಿಸಿ ನೀಡಲಾಗುತ್ತದೆ. ದೀರ್ಘಕಾಲದಿಂದ ಬಿಲ್​​ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಅವರು ಮನವಿ ಮಾಡಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.