ಕೋಲ್ಕತ್ತಾ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಬೆಂಬಲಿಗರೊಬ್ಬರ ಕಾಮೆಂಟ್ಗೆ ನೀಡಿದ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಏ.23 ರಂದು ಉತ್ತರ 24 ಪರಗಣ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಅನಿಂದ್ಯ ರಾಜು ಬ್ಯಾನರ್ಜಿ ಪರವಾಗಿ ನಡೆಸಲು ಉದ್ದೇಶಿಸಿದ್ದ ಬೃಹತ್ ರೋಡ್ಶೋಗೆ ಹೋಗುವ ಹಾದಿಯಲ್ಲಿ ಅಮಿತ್ ಶಾ ಇದ್ದರು.
ರೋಡ್ ಶೋ ಆರಂಭಕ್ಕೂ ಮುನ್ನ ಅಮಿತ್ ಶಾ ಅವರು ತಾವು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ನಿಂದ ಕಂಡ ಸೂರ್ಯಾಸ್ತದ ದೃಶ್ಯವನ್ನು ಹಂಚಿಕೊಂಡಿದ್ದರು. ಅದಕ್ಕೆ “ತೃಣಮೂಲ ಕಾಂಗ್ರೆಸ್ನ ಭ್ರಷ್ಟಾಚಾರ ಮತ್ತು ಗೂಂಡಾಗಿರಿಯ ಸೂರ್ಯ ಮುಳುಗಿದ್ದಾನೆ” ಎಂಬ ಶೀರ್ಷಿಕೆ ಬರೆದಿದ್ದರು. ರೋಡ್ ಶೋಗೆ ಅಮಿತ್ ಶಾ ಬರುವುದು ತಡವಾದ ಕಾರಣ ಸೂರ್ಯಾಸ್ತದ ವಿಡಿಯೋಗೆ ಬಾರಾಸತ್ ಮೂಲದ ವಕೀಲೆ ತನುಶ್ರೀ ಸರ್ಕಾರ್ ಎಂಬುವವರು ಜನರು ಬಿಸಿಲಿನಲ್ಲಿ ಕಾದು ಸುಸ್ತಾಗುತ್ತಿದ್ದಾರೆ ಎಂದು ಕಮೆಂಟ್ ಮಾಡಿ ತಿಳಿಸಿದ್ದರು.

“ಅಮಿತ್ ಜೀ, ಬೇಗ ಬನ್ನಿ… ಬಿಸಿಲಿನಲ್ಲಿ ನಿಮಗಾಗಿ ನಾವು ಬಹಳ ಹೊತ್ತಿನಿಂದ ಕಾಯುತ್ತಿದ್ದೇವೆ” ಎಂದು ವಿನಂತಿಸಿದ್ದರು. ಇದಕ್ಕೆ ಅಮಿತ್ ಶಾ ಅವರು ವೈಯಕ್ತಿಕವಾಗಿ ಪ್ರತಿಕ್ರಿಯಿಸಿ, “ವಿಳಂಬಕ್ಕಾಗಿ ಕ್ಷಮಿಸಿ. ಇನ್ನು 10 ನಿಮಿಷಗಳಲ್ಲಿ ಅಲ್ಲಿಗೆ ತಲುಪಲಿದ್ದೇನೆ” ಎಂದು ತಿಳಿಸಿದ್ದರು.
ಸಾಮಾನ್ಯವಾಗಿ ಉನ್ನತ ನಾಯಕರು ಸೋಶಿಯಲ್ ಮೀಡಿಯಾ ತಂಡಗಳ ಮೂಲಕ ಪೋಸ್ಟ್ ಮಾಡುತ್ತಾರೆ. ಆದರೆ ಈ ಬಾರಿ ಅಮಿತ್ ಶಾ ಅವರೇ ವೈಯಕ್ತಿಕವಾಗಿ “ವಿಳಂಬಕ್ಕಾಗಿ ಕ್ಷಮಿಸಿ, 10 ನಿಮಿಷಗಳಲ್ಲಿ ಬರುತ್ತಿದ್ದೇನೆ” ಎಂದು ಉತ್ತರಿಸಿದ್ದು ವಿಶೇಷವಾಗಿತ್ತು. ಜನರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಅಮಿತ್ ಶಾ ಅವರು ಕಳೆದ 15 ದಿನಗಳ ಕಾಲ ಪಶ್ಚಿಮ ಬಂಗಾಳದಲ್ಲೇ ತಂಗಿ ಪ್ರಚಾರ ನಡೆಸುತ್ತಿದ್ದಾರೆ.















