ಉಡುಪಿ ಕುಂದಾಪುರ ತಾಲೂಕಿನ ವಕ್ವಾಡಿ ದ್ಯಾಗಳಮನೆಯ ಆವರಣದ ಹೊರಭಾಗದಲ್ಲಿ ಪುರಾತನ ಕಾಲದ ಜಿಂಕೆ ಬೇಟೆಯ ವೀರಗಲ್ಲು ಪತ್ತೆಯಾಗಿದ್ದು, ಇದು ಸುಮಾರು 9ರಿಂದ 10ನೇ ಶತಮಾನದ ಆಳುಪರ ಕಾಲದ ಶಿಲ್ಪವಾಗಿರಬಹುದೆಂದು ಪುರಾತತ್ತ್ವ ಸಂಶೋಧಕ ಹಾಗೂ ಉಡುಪಿಯ ಆದಿಮ ಕಲಾ ಟ್ರಸ್ಟ್‌ನ ಸ್ಥಾಪಕ ಸಂಚಾಲಕ ಪ್ರೊ. ಟಿ. ಮುರುಗೇಶಿ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ವಕ್ವಾಡಿಯ ಕವಿತಾ ಕುಲಾಲ್ ನೀಡಿದ ಮಾಹಿತಿಯ ಆಧಾರದಲ್ಲಿ ಆದಿಮ ಕಲಾ ಟ್ರಸ್ಟ್ ವತಿಯಿಂದ ನಡೆಸಿದ ಪುರಾತತ್ತ್ವ ಅನ್ವೇಷಣೆಯ ವೇಳೆ ಈ ವೀರಗಲ್ಲು ಪತ್ತೆಯಾಗಿದೆ. ಸುಮಾರು ನಾಲ್ಕು ಅಡಿ ಎತ್ತರದ ಈ ವೀರಗಲ್ಲು ಮೂರು ಅಂಕಣಗಳನ್ನು ಒಳಗೊಂಡಿದೆ. ಕೆಳಗಿನ ಅಂಕಣದಲ್ಲಿ ಇಬ್ಬರು ವೀರರು ತಮ್ಮ ಬೇಟೆ ನಾಯಿಗಳೊಂದಿಗೆ ನಿಂತಿರುವ ದೃಶ್ಯ ಕೆತ್ತಲಾಗಿದೆ. ಮಧ್ಯದ ಅಂಕಣದಲ್ಲಿ ಕೊಂಬಿನ ಎರಡು ಜಿಂಕೆಗಳ ಚಿತ್ರಣವಿದ್ದು, ಒಂದರ ಕೊರಳಿಗೆ ಬಾಣ ಅಥವಾ ಈಟಿ ತಗುಲಿರುವ ದೃಶ್ಯ ಕಾಣಿಸುತ್ತದೆ. ಅದರ ಪಕ್ಕದಲ್ಲಿ ಇಬ್ಬರು ವೀರರ ಶಿಲ್ಪಗಳನ್ನು ಚಿತ್ರಿಸಲಾಗಿದೆ. ಮೇಲಿನ ಅಂಕಣದಲ್ಲಿ ಎತ್ತರದ ಪೀಠದ ಮೇಲೆ ಶಿವಲಿಂಗದ ಶಿಲ್ಪವಿದ್ದು, ಅದರ ಮೇಲ್ಭಾಗದಲ್ಲಿ ದ್ರಾವಿಡ ಶೈಲಿಯ ದೇವಾಲಯದ ವಿಮಾನವನ್ನು ಕೆತ್ತಲಾಗಿದೆ. ಲಿಂಗದ ಎರಡೂ ಬದಿಯಲ್ಲಿ ಕೈಮುಗಿದು ಕುಳಿತಿರುವ ಇಬ್ಬರು ವೀರರ ಚಿತ್ರಣವೂ ಇದೆ ಎಂದು ಪರೀಶಿಲಿಸಲಾಗಿದೆ ಎನ್ನಬಹುದು. ಈ ಶಿಲಾಫಲಕವು ಸುಮಾರು 45 ಇಂಚು ಉದ್ದ ಹಾಗೂ 22.5 ಇಂಚು ಅಗಲವಿದ್ದು, ಮೂರು ಅಂಕಣಗಳಾಗಿ ವಿಭಜಿಸಲಾಗಿದೆ ಎಂದು ತಿಳಿಯಬಹುದು.
ಹಾಗೂ ಮೇಲಿನ ಅಂಕಣ 12.5 ಇಂಚು, ಮಧ್ಯದ ಅಂಕಣ 17.5 ಇಂಚು ಹಾಗೂ ಕೆಳಗಿನ ಅಂಕಣ 15 ಇಂಚು ಎತ್ತರ ಹೊಂದಿದೆ. ಬೇಟೆ ಪ್ರಾಚೀನ ಕಾಲದಲ್ಲಿ ರಾಜಮನೆತನಗಳ ಹವ್ಯಾಸ ಹಾಗೂ ರಾಜನೀತಿಯ ಭಾಗವಾಗಿತ್ತು. ಭಾರತೀಯ ಮಹಾಕಾವ್ಯಗಳು ಹಾಗೂ ತುಳುನಾಡಿನ ಪಾಡ್ದನಗಳಲ್ಲಿ ಬೇಟೆಯ ಕುರಿತ ಅನೇಕ ಉಲ್ಲೇಖಗಳು ಕಂಡುಬರುತ್ತವೆ. ಆದರೆ, ಶಾಸನಗಳಲ್ಲಿ ಇಂತಹ ಬೇಟೆಯ ದೃಶ್ಯಗಳು ಅಪರೂಪವಾಗಿರುವುದರಿಂದ ಈ ವೀರಗಲ್ಲಿಗೆ ವಿಶೇಷ ಚಾರಿತ್ರಿಕ ಮಹತ್ವವಿದೆ ಎಂದು ಪ್ರೊ. ಮುರುಗೇಶಿ ತಿಳಿಸಿದ್ದಾರೆ. ತುಳುನಾಡಿನಲ್ಲಿ ಪತ್ತೆಯಾಗಿರುವ ಎರಡನೇ ಬೇಟೆಯ ವೀರಗಲ್ಲು ಇದಾಗಿದ್ದು, ಮೊದಲನೆಯದು ಹೆಬ್ರಿ ತಾಲೂಕಿನ ಸೋಮೇಶ್ವರದಲ್ಲಿ ಪತ್ತೆಯಾಗಿತ್ತು. ಕರ್ನಾಟಕದಲ್ಲಿ ಹಂದಿ ಬೇಟೆಯ ಶಿಲ್ಪಗಳು ಹೆಚ್ಚಾಗಿ ಕಂಡುಬಂದರೂ, ಜಿಂಕೆ ಬೇಟೆಯ ಶಿಲ್ಪಗಳು ಅತ್ಯಂತ ವಿರಳವೆಂದು ಅವರು ವಿವರಿಸಿದ್ದಾರೆ. ಈ ವೀರಗಲ್ಲಿನಲ್ಲಿ ಕೆತ್ತಲಾಗಿರುವ ವೀರರು ಸಾಮಾನ್ಯ ವ್ಯಕ್ತಿಗಳಾಗಿರದೆ ರಾಜಕುಮಾರರಾಗಿರಬಹುದೆಂಬ ಸೂಚನೆಗಳಿವೆ.
ಆದರೆ ಕಂಠಾಭರಣ, ಭುಜಕೀರ್ತಿ, ಕೈಕಡಗ, ಕಿರುಗತ್ತಿ ಹಾಗೂ ಬಿಲ್ಲು-ಬಾಣಗಳೊಂದಿಗೆ ಚಿತ್ರಿತವಾಗಿರುವ ಈ ಶಿಲ್ಪಗಳು ರಾಜವಂಶೀಯರನ್ನೇ ಪ್ರತಿನಿಧಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೊಂಬಿನ ಜಿಂಕೆ ಬೇಟೆಯ ಸಂದರ್ಭದಲ್ಲಿ ಜಿಂಕೆಯ ದಾಳಿಗೆ ಒಳಗಾಗಿ ಈ ವೀರರು ಮೃತಪಟ್ಟಿರಬಹುದೆಂದು ಊಹಿಸಲಾಗಿದೆ. ಅದಕ್ಕಾಗಿ ಅವರನ್ನು ದೇವರ ಸನ್ನಿಧಿಯಲ್ಲಿ ಕುಳಿತಂತೆ ಚಿತ್ರಿಸಿ, ಸ್ವರ್ಗಸ್ಥರಾದರೆಂಬುದನ್ನು ಸಂಕೇತಾತ್ಮಕವಾಗಿ ತೋರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ವೀರಗಲ್ಲಿನಲ್ಲಿ ಯಾವುದೇ ಶಾಸನ ಬರಹಗಳಿಲ್ಲದಿದ್ದರೂ, ಶಿಲ್ಪಶೈಲಿಯ ಆಧಾರದ ಮೇಲೆ ಇದು 9-10ನೇ ಶತಮಾನದ ಆಳುಪರ ಕಾಲದ ವೀರಗಲ್ಲು ಎಂದು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.















