ಚಿಕ್ಕಬಳ್ಳಾಪುರ : ಪ್ರೀತಿಗೆ ಕಣ್ಣಿಲ್ಲ, ವಯಸ್ಸಿನ ಮಿತಿಯಿಲ್ಲ ಎಂಬ ಮಾತುಗಳನ್ನು ನಾವು ಕೇಳಿದ್ದೇವೆ. ಆದರೆ ಇಲ್ಲಿ ವರಸೆಯೂ ಅಡ್ಡಿಯಾಗಿಲ್ಲ.., ವರಸೆಯಲ್ಲಿ ಅಕ್ಕ-ತಮ್ಮನಾಗಬೇಕಿದ್ದ, ಜೋಡಿಯೊಂದು ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ, ಮದುವೆಯಾಗಿ ಈಗ ರಕ್ಷಣೆ ಕೋರಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಅರಳಿದ ಪ್ರೇಮ : ದೇವನಹಳ್ಳಿ ಮೂಲದ ಶಶಿಕಲಾ (29) ಹಾಗೂ ಹೊಸಕೋಟೆಯ ಪ್ರವೀಣ್ (24) ಈ ವಿಚಿತ್ರ ಪ್ರೇಮ ಕಥೆಯ ನಾಯಕ-ನಾಯಕಿ. ಮೂರು ವರ್ಷಗಳ ಹಿಂದೆ ಸಂಬಂಧಿಕರ ಮನೆಗೆ ಹೋದಾಗ ಪರಿಚಯವಾದ ಈ ಜೋಡಿ, ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಚಾಟಿಂಗ್ ಮೂಲಕ ಹತ್ತಿರವಾಗಿದ್ದರು. ಕಾಲಕ್ರಮೇಣ ಗೆಳೆತನ ಪ್ರೀತಿಗೆ ತಿರುಗಿತ್ತು.
ವರಸೆ ಅಡ್ಡ ಬಂದರೂ ಬಗ್ಗದ ಶಶಿಕಲಾ : ಟ್ವಿಸ್ಟ್ ಏನೆಂದರೆ, ಕುಟುಂಬದ ಲೆಕ್ಕಾಚಾರದ ಪ್ರಕಾರ ಪ್ರವೀಣ್ ಶಶಿಕಲಾಗೆ ವರಸೆಯಲ್ಲಿ ‘ತಮ್ಮ’ ನಾಗಬೇಕು. ಈ ಕಾರಣಕ್ಕಾಗಿಯೇ ಇವರ ಪ್ರೀತಿಗೆ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಶಶಿಕಲಾಗೆ ಬೇರೆ ಹುಡುಗನ ಜೊತೆ ಮದುವೆ ನಿಶ್ಚಯಿಸಿ, ಕಲ್ಯಾಣ ಮಂಟಪವನ್ನೂ ಬುಕ್ ಮಾಡಲಾಗಿತ್ತು.
ಮದುವೆ ಮಂಟಪ ಬಿಟ್ಟು ಎಸ್ಕೇಪ್ : ಮನೆ ಕಡೆಯವರು ನಿಗದಿಪಡಿಸಿದ ಮದುವೆಗೆ ಒಪ್ಪದ ಶಶಿಕಲಾ, ಕೊನೆಗೂ ತನ್ನ ಪಟ್ಟು ಬಿಡದೆ ಪ್ರಿಯಕರ ಪ್ರವೀಣ್ ಜೊತೆ ಎಸ್ಕೇಪ್ ಆಗಿದ್ದಾರೆ. ಇಬ್ಬರೂ ಮದುವೆಯಾದ ನಂತರ ಈಗ ಜೀವ ಬೆದರಿಕೆ ಇದೆ ಎಂದು ಹೆದರಿ ಚಿಕ್ಕಬಳ್ಳಾಪುರದ ಮಹಿಳಾ ಪೊಲೀಸ್ ಠಾಣೆಗೆ ರಕ್ಷಣೆ ಕೋರಿ ದೂರು ನೀಡಿದ್ದಾರೆ.
















